ಪಟನಾ: ದೇಶಾದ್ಯಂತ ನವರಾತ್ರಿ (Navaratri) ಹಾಗೂ ಮಹಾನವಮಿ (Maha Navami) ಹಿನ್ನೆಲೆಯಲ್ಲಿ ಸಂಭ್ರಮ, ಸಡಗರದಿಂದ ದುರ್ಗಾ ಪೂಜೆ ಮಾಡಲಾಗುತ್ತಿದೆ. ಉತ್ತರ ಭಾರತದಲ್ಲಂತೂ ದುರ್ಗೆಯ ಆರಾಧನೆ (Durga Puja) ಜೋರಾಗಿದೆ. ಆದರೆ, ಬಿಹಾರದ ಗೋಪಾಲ್‌ಗಂಜ್‌ನಲ್ಲಿ ದುರ್ಗಾ ಪೂಜೆ ವೇಳೆಯೇ ಕಾಲ್ತುಳಿತ (Stampede) ಉಂಟಾಗಿದ್ದು, 5 ವರ್ಷದ ಮಗು ಹಾಗೂ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ.
ಗೋಪಾಲ್‌ಗಂಜ್‌ನಲ್ಲಿ ಸೋಮವಾರ ರಾತ್ರಿ ದುರಂತ ಸಂಭವಿಸಿದೆ. ಮಹಾನವಮಿ ಹಿನ್ನೆಲೆಯಲ್ಲಿ ರಾಜಾ ದಳ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಸಾವಿರಾರು ಜನ ಸೇರಿದ್ದರು. ಇದೇ ವೇಳೆ ಭಾರಿ ಪ್ರಮಾಣದಲ್ಲಿ ನೂಕುನುಗ್ಗಲು ಉಂಟಾಗಿದೆ. ಇದಾದ ಬಳಿಕ ಕಾಲ್ತುಳಿತ ಉಂಟಾಗಿದ್ದು, ಮಗು ಸೇರಿ ಮೂವರು ಮೃತಪಟ್ಟಿದ್ದಾರೆ. ಕಾಲ್ತುಳಿತದ ತೀವ್ರತೆಗೆ 13ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಲ್ತುಳಿತ ಉಂಟಾಗಿದ್ದು ಹೇಗೆ?
“ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಪ್ರಸಾದ ಪಡೆಯಲು ಕೂಡ ನೂರಾರು ಜನ ಸಾಲಿನಲ್ಲಿ ನಿಂತಿದ್ದರು. ಆಗ ನೂಕುನುಗ್ಗಲು ಉಂಟಾಗಿದ್ದು, ಇದೇ ವೇಳೆ ಐದು ವರ್ಷದ ಮಗುವೊಂದು ಕೆಳಗೆ ಬಿದ್ದಿದೆ. ಆ ಮಗುವನ್ನು ಇಬ್ಬರು ಮಹಿಳೆಯರು ರಕ್ಷಿಸಲು ಹೋಗಿದ್ದಾರೆ. ಆಗ ಭಾರಿ ಪ್ರಮಾಣದ ಜನ ಅವರ ಮೇಲೆ ನಡೆದುಹೋದ ಕಾರಣ ಮೂವರೂ ಮೃತಪಟ್ಟಿದ್ದಾರೆ” ಎಂದು ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನವಾಲ್ ಕಿಶೋರ್ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ: Ganga River: ದುರ್ಗಾದೇವಿ ಮೂರ್ತಿ ವಿಸರ್ಜನೆ ಪೂರ್ವ, ನಂತರ ಗಂಗಾ ನದಿ ಮಾಲಿನ್ಯ ಪರೀಕ್ಷೆ!
“ಐದು ವರ್ಷದ ಬಾಲಕ ಬಿದ್ದಿದ್ದನ್ನು ನೋಡಿದ ಇಬ್ಬರು ಹಿರಿಯ ಮಹಿಳೆಯರು ಆತನತ್ತ ಓಡಿಹೋಗಿದ್ದಾರೆ. ಆದರೆ, ಜನರ ನೂಕುನುಗ್ಗಲಿನ ಮಧ್ಯೆ ಅವರಿಗೆ ಓಡಿಹೋಗಲು ಆಗಿಲ್ಲ. ಹಾಗಾಗಿ, ಅವರು ಕೂಡ ಕುಸಿದು ಬಿದ್ದಿದ್ದಾರೆ. 13 ಗಾಯಾಳುಗಳಿಗೆ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ದುರ್ಗಾ ಪೂಜೆ ವೇಳೆ ನೂರಾರು ಜನ ಸೇರಿದಾಗ ಎಚ್ಚರಿಕೆಯಿಂದ ಇರಬೇಕು” ಎಂದು ನವಾಲ್ ಕಿಶೋರ್ ಚೌಧರಿ ಅವರು ಭಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.