Site icon Vistara News

ಶಾಲೆ ಬಳಿಯ ಮದ್ಯದಂಗಡಿ ವಿರುದ್ಧ ಕೋರ್ಟ್‌ ಮೊರೆ ಹೋದ 5 ವರ್ಷದ ಪೋರ; ನ್ಯಾಯ ಸಿಕ್ತಾ?

Court Order

Andhra Pradesh High Court halts cash transfers in the State until voting on Monday

ಲಖನೌ: ಶಾಲೆ-ಕಾಲೇಜುಗಳ ಪಕ್ಕದಲ್ಲಿ ಮದ್ಯದಂಗಡಿಗಳು (Liquor Shop) ಇರಬಾರದು ಎಂಬ ಕಾನೂನು ಇದೆ. ಆದರೆ, ಲಂಚಕ್ಕಾಗಿ ಅಧಿಕಾರಿಗಳು ಶಾಲೆಗಳ ಬಳಿಯೇ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಿದ ಪ್ರಕರಣಗಳು ಸುದ್ದಿಯಾಗುತ್ತಿವೆ. ಇದೇ ರೀತಿ, ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿರುವ ಶಾಲೆಯ ಬಳಿಯೇ ಮದ್ಯದಂಗಡಿ ತೆರೆಯಲಾಗಿದೆ. ಇನ್ನು, ಮದ್ಯದಂಗಡಿಯನ್ನು ಮುಚ್ಚಬೇಕು ಎಂದು 5 ವರ್ಷದ ಬಾಲಕನೊಬ್ಬ ಅಲಹಾಬಾದ್‌ ಹೈಕೋರ್ಟ್‌ಗೆ (Allahabad High Court) ಅರ್ಜಿ ಸಲ್ಲಿಸಿದ್ದು, ಪ್ರಕರಣವೀಗ ಭಾರಿ ಸುದ್ದಿಯಾಗುತ್ತಿದೆ.

ಹೌದು, ಅಥರ್ವ್‌ ಎಂಬ ಐದು ವರ್ಷದ ಬಾಲಕನು ತನ್ನ ಶಾಲೆಯ ಬಳಿ ಇರುವ ಮದ್ಯದಂಗಡಿ ವಿರುದ್ಧ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾನೆ. ಅಥರ್ವ್‌ ತಂದೆ ಪ್ರಸೂನ್‌ ದೀಕ್ಷಿತ್‌ ಅವರು ವಕೀಲರಾಗಿದ್ದು, ಅವರ ಮೂಲಕ ಪಿಐಎಲ್‌ ಸಲ್ಲಿಸಿದ್ದಾನೆ. ಈತನು ಕಾನ್ಪುರದ ಆಜಾದ್‌ ನಗರದಲ್ಲಿರುವ ಸೇಠ್‌ ಎಂಆರ್‌ ಜಯಪುರಿಯಾ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾನೆ. ಶಾಲೆಯ ಬಳಿಯೇ ಮದ್ಯದಂಗಡಿ ಇರುವ ಕಾರಣ ಈತನು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಅಲಹಾಬಾದ್‌ ಹೈಕೋರ್ಟ್.

“ನಮ್ಮ ಶಾಲೆಯಲ್ಲಿ 475 ವಿದ್ಯಾರ್ಥಿಗಳು ಓದುತ್ತಿದ್ದೇವೆ. ಶಾಲೆಯ ಪಕ್ಕದಲ್ಲೇ ಮದ್ಯದಂಗಡಿ ಇರುವುದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಕುಡಿದ ಮತ್ತಿನಲ್ಲಿ ಒಂದಷ್ಟು ಜನ ಕೆಟ್ಟ ಭಾಷೆಯಲ್ಲಿ ಮಾತನಾಡಿಕೊಂಡು ಹೋಗುತ್ತಾರೆ. ಆ ಬೈಗಳಗಳು, ಜೋರು ಧ್ವನಿ ನಮಗೆ ತೊಂದರೆ ಕೊಡುತ್ತಿದೆ. ಶಾಲೆ ನಿರ್ಮಾಣವಾದ ಬಳಿಕವೇ ಮದ್ಯದಂಗಡಿಯ ಪರವಾನಗಿ ನವೀಕರಣ ಮಾಡಲಾಗಿದೆ. ಇದು ಕಾನೂನುಬಾಹಿರವಾಗಿದೆ. ಹಾಗಾಗಿ, ಕ್ರಮ ತೆಗೆದುಕೊಳ್ಳಬೇಕು” ಎಂದು ಬಾಲಕನ ಪರ ವಕೀಲರು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: Sachin Tendulkar: ಕಾಶ್ಮೀರದ ಗಲ್ಲಿಯಲ್ಲಿ ಕ್ರಿಕೆಟ್​ ಆಡಿದ ದಿಗ್ಗಜ ಸಚಿನ್​ ತೆಂಡೂಲ್ಕರ್​; ವಿಡಿಯೊ ವೈರಲ್​

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, “ಶಾಲೆಯ 100 ಮೀಟರ್‌ ಅಕ್ಕಪಕ್ಕದಲ್ಲಿ ಮದ್ಯದಂಗಡಿ ಇರುವಂತಿಲ್ಲ” ಎಂದು ಹೇಳಿದ್ದಲ್ಲದೆ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಅಬಕಾರಿ ಇಲಾಖೆಗೆ ನೋಟಿಸ್‌ ಜಾರಿ ಮಾಡಿದೆ. ಹಾಗೆಯೇ, ಮದ್ಯದಂಗಡಿಯ ಪರವಾನಗಿಯನ್ನು ನವೀಕರಿಸಿದ್ದು ಏಕೆ ಎಂದು ಕೂಡ ಪ್ರಶ್ನಿಸಿದೆ. ಶೀಘ್ರದಲ್ಲೇ ಮದ್ಯದಂಗಡಿಯನ್ನು ಮುಚ್ಚಿಸುವ ಕುರಿತು ಆದೇಶ ಬರಲಿ ಎಂಬುದು ಶಾಲೆಯ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರ ಆಶಯವಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version