Site icon Vistara News

PM Modi France Visit: ಫ್ರಾನ್ಸ್‌ನಲ್ಲಿ ಓದುವವರಿಗೆ ಮೋದಿ ಸಿಹಿ ಸುದ್ದಿ; ಸಿಗಲಿದೆ 5 ವರ್ಷ ಪೋಸ್ಟ್‌ ಸ್ಟಡಿ ವೀಸಾ

PM Narendra Modi Speech In Paris

Thalaiva, Vanakkam: PM Narendra Modi Outreach In France

ಪ್ಯಾರಿಸ್:‌ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಫ್ರಾನ್ಸ್‌ಗೆ ತೆರಳಿದ್ದು (PM Modi France Visit) ಅದ್ಧೂರಿ ಸ್ವಾಗತ ದೊರೆತಿದೆ. ಹಾಗೆಯೇ, ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವ ಆಗಿರುವ ʼಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ʼ ಅನ್ನು ನೀಡಲಾಗಿದೆ. ಫ್ರಾನ್ಸ್‌ ಭೇಟಿ ಮಧ್ಯೆಯೇ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಭಾರತದ ವಿದ್ಯಾರ್ಥಿಗಳಿಗೆ ನೀಡುವ ಪೋಸ್ಟ್‌ ಸ್ಟಡಿ ವೀಸಾ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, “ಕಳೆದ ಬಾರಿ ನಾನು ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗ ಭಾರತದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳವರೆಗೆ ಪೋಸ್ಟ್‌ ಸ್ಟಡಿ ವೀಸಾ ನೀಡಲು ತೀರ್ಮಾನಿಸಲಾಗಿತ್ತು. ಈ ಬಾರಿ ಭೇಟಿ ನೀಡಿದಾಗ ಇದನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಲು ಫ್ರಾನ್ಸ್‌ ತೀರ್ಮಾನಿಸಿದೆ” ಎಂದು ಭಾರತದ ವಿದ್ಯಾರ್ಥಿಗಳಿಗೆ ಮೋದಿ ಸಿಹಿ ಸುದ್ದಿ ನೀಡಿದರು. ಪೋಸ್ಟ್‌ ಸ್ಟಡಿ ವೀಸಾ ನೀಡುವುದರಿಂದ ಭಾರತದ ವಿದ್ಯಾರ್ಥಿಗಳು ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಉದ್ಯೋಗ ಗಿಟ್ಟಿಸಿಕೊಂಡು, ಅಲ್ಲಿಯೇ ಇರಲು ನೆರವಾಗುತ್ತದೆ.

ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತು

ಭಾರತದ ಏಕೀಕೃತ ಪಾವತಿ ವ್ಯವಸ್ಥೆ (UPI) ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ಭಾರತದ ಯುಪಿಐಅನ್ನು ಫ್ರಾನ್ಸ್‌ನಲ್ಲಿ ಅಳವಡಿಸಿಕೊಳ್ಳುವ ದಿಸೆಯಲ್ಲಿ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ. ಐಫೆಲ್‌ ಟವರ್‌ನಿಂದಲೇ ಯುಪಿಐಗೆ ಚಾಲನೆ ನೀಡಲಾಗಿದೆ. ಇದರಿಂದ ಐಫೆಲ್‌ ಟವರ್‌ನಲ್ಲೂ ಭಾರತದ ಪ್ರವಾಸಿಗರು ರೂಪಾಯಿಯಲ್ಲಿ ಹಣ ಪಾವತಿ ಮಾಡಬಹುದಾಗಿದೆ” ಎಂದು ಒಪ್ಪಂದದ ಕುರಿತು ಮಾಹಿತಿ ನೀಡಿದರು. ಯುರೋಪ್‌ನಲ್ಲಿ ಸಿಂಗಾಪುರ ಬಳಿಕ ಯುಪಿಐ ಅಳವಡಿಸಿಕೊಂಡ ಎರಡನೇ ದೇಶ ಫ್ರಾನ್ಸ್‌ ಆಗಿದೆ.

ಇದನ್ನೂ ಓದಿ: PM Modi France Visit: ನರೇಂದ್ರ ಮೋದಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿದ ಫ್ರಾನ್ಸ್‌

ನರೇಂದ್ರ ಮೋದಿಯವರ ಎರಡು ದಿನಗಳ ಫ್ರಾನ್ಸ್ ಭೇಟಿಯ ಮೊದಲ ದಿನದಂದು ವಿಶೇಷ ಭೋಜನ ನಡೆಯಿತು. “ಸಂಜೆ ಎಲಿಸಿ ಅರಮನೆಯಲ್ಲಿ ನನಗೆ ಆತಿಥ್ಯ ನೀಡಿದ್ದಕ್ಕಾಗಿ ನಾನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಶ್ರೀಮತಿ ಮ್ಯಾಕ್ರನ್ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.‌ ಫ್ರಾನ್ಸ್‌ ಭೇಟಿಯ ಹಲವು ಫೋಟೊ ಹಾಗೂ ವಿಡಿಯೊಗಳನ್ನು ಕೂಡ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಫ್ರಾನ್ಸ್‌ ಭೇಟಿ ಬಳಿಕ ಮೋದಿ ಯುಎಇಗೆ ತೆರಳಲಿದ್ದಾರೆ. ಎರಡು ರಾಷ್ಟ್ರಗಳ ಭೇಟಿಗೆ ಮೋದಿ ಮೂರು ದಿನ ಪ್ರವಾಸ ಕೈಗೊಂಡಿದ್ದಾರೆ.

Exit mobile version