‘ನಾನೂ ಮದುವೆಯಾಗಬೇಕು, ನನಗೊಬ್ಬಳು/ನು ಸಂಗಾತಿ ಬೇಕು’-ವಯಸ್ಸಿಗೆ ಬಂದ ಹುಡುಗ/ಹುಡುಗಿಯರಲ್ಲಿ ಈ ಆಸೆ-ಕಾತರ ಮೂಡುವುದು ಸಹಜ. ಪಾಲಕರೂ ಕೂಡ ತಮ್ಮ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಅವರಿಗೊಂದು ಪತಿ/ಪತ್ನಿ ಹುಡುಕಲು ಪ್ರಾರಂಭ ಮಾಡುತ್ತಾರೆ. ಇನ್ನೂ ಕೆಲವು ಪ್ರೀತಿಸಿ ಮದುವೆಯಾಗುವ ಮೂಲಕ ತಮ್ಮ ಸಂಗಾತಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ.
ಆದರೆ ಮಹಾರಾಷ್ಟ್ರದ ಸೋಲಾಪುರದಲ್ಲಿ 50 ಮಂದಿ ಅವಿವಾಹಿತರು ತಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ವಿಚಿತ್ರವಾಗಿ-ವಿಭಿನ್ನವಾಗಿ ಅಳಲು ತೋಡಿಕೊಂಡಿದ್ದಾರೆ. 50 ಯುವಕರೂ ಥೇಟ್ ಮದುಮಗನಂತೆ ವೇಷಭೂಷಣ ಹಾಕಿಕೊಂಡಿದ್ದಾರೆ. ತೆಲೆಗೆ ಬಾಸಿಂಗ (ಸೆಹ್ರಾಸ್) ಧರಿಸಿ, ಚೆಂದನೆಯ ಶೆರ್ವಾನಿ/ಕುರ್ತಾವನ್ನು ಧರಿಸಿಕೊಂಡು, ‘ಹೆಂಡತಿ ಬೇಕು’ ‘ಯಾರಾದರೂ ನನಗೆ ಹೆಣ್ಣು ಕೊಡುತ್ತೀರಾ’ ಎಂಬಿತ್ಯಾದಿ ಬರಹಗಳುಳ್ಳ ಪ್ಲೇಕಾರ್ಡ್ಗಳನ್ನು ಕೈಯಲ್ಲಿ ಹಿಡಿದು, ಕುದುರೆ ಸವಾರಿ ಮಾಡುತ್ತ ಜಿಲ್ಲಾಡಳಿತ ಕಚೇರಿಗೆ ಮೆರವಣಿಗೆ ಬಂದಿದ್ದಾರೆ. ಅಂದಹಾಗೇ ಇವರೆಲ್ಲ 25 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಎನ್ನಲಾಗಿದೆ.
ಮದುವೆ ದಿನ ವರ ಹೀಗೆ ಶೃಂಗರಿಸಿಕೊಂಡು, ಕುದುರೆ ಮೇಲೆ ಮಂಟಪಕ್ಕೆ ಮೆರವಣಿಗೆ ಬರುವ ಸಂಪ್ರದಾಯ ಇದೆ. ಆದರೆ ಈ 50 ಮಂದಿ ತಮಗೆ ಹೆಣ್ಣು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳಲು ಮಹಾರಾಷ್ಟ್ರದ ಸೋಲಾಪುರ ಜಿಲ್ಲಾಡಳಿತ ಕಚೇರಿಗೆ ಹೀಗೆ ಮೆರವಣಿಗೆ ಆಗಮಿಸಿದ್ದಾರೆ. ಇದೊಂದು ಮದುವೆ ಮೆರವಣಿಗೆಯಂತೆ ಇತ್ತು. ಸಂಗೀತ ವಾದ್ಯಗಳು, ಡ್ರಮ್ಗಳ ವಾದನವೂ ಜತೆಯಾಗಿತ್ತು.
ತಮಗೆ ಹೆಣ್ಣು ಸಿಗುತ್ತಿಲ್ಲ ಎಂಬ ಅಸಮಾಧಾನ ತೋಡಿಕೊಳ್ಳುವ ಜತೆ ಇವರು ಮಹಾರಾಷ್ಟ್ರದಲ್ಲಿರುವ ಲಿಂಗ ಅನುಪಾತ ಅಸಮಾನತೆಯ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಲಿಂಗಾನುಪಾತ ಅಸಮಾನತೆ ಹೋಗಲಾಡಿಸಲು ಕ್ರಮ ಕೈಗೊಳ್ಳುವಂತೆ ಸೋಲಾಪುರ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2020-21) ಪ್ರಕಾರ ಮಹಾರಾಷ್ಟ್ರದಲ್ಲಿ ಲಿಂಗಾನುಪಾತ 1000 ಪುರುಷರಿಗೆ 920 ಮಹಿಳೆಯರು ಇದ್ದಾರೆ. ಅಂದರೆ ಯುವತಿಯರ ಸಂಖ್ಯೆ ಕಡಿಮೆ ಇದೆ. ಈ ಲಿಂಗ ಅನುಪಾತ ಅಸಮಾನತೆ ಕೆಲವು ಜಿಲ್ಲೆಗಳಲ್ಲಿ ತೀವ್ರವಾಗಿದ್ದು, ಅದರಲ್ಲಿ ಸೋಲಾಪುರವೂ ಒಂದು.
ಹೀಗೆ ಮಹಾರಾಷ್ಟ್ರದಲ್ಲಿ ಲಿಂಗಾನುಪಾತ ಅಸಮತೋಲನ ಇದ್ದು ಅದನ್ನು ಸರಿಪಡಿಸಲು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (PCPNDT Act) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಲು ಜ್ಯೋತಿ ಕ್ರಾಂತಿ ಪರಿಷತ್ ಎಂಬ ಎನ್ಜಿಒ ಇಂಥದ್ದೊಂದು ಮೆರವಣಿಗೆಯನ್ನು ಆಯೋಜಿಸಿತ್ತು. ಹೀಗೆ ಮದುವೆ ವಯಸ್ಸಾದರೂ ಹೆಣ್ಣು ಸಿಗದೆ ಅವಿವಾಹಿತರಾಗಿ ಉಳಿದ ಯುವಕರೆಲ್ಲ ಇದರಲ್ಲಿ ಪಾಲ್ಗೊಂಡಿದ್ದರು. ಅಂದಹಾಗೇ, ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆದು, ಲಿಂಗಾನುಪಾತ ಸಮತೋಲನ ಮಾಡುವ ಸಲುವಾಗಿದೇ PCPNDT Actನ್ನು 1994ರಲ್ಲಿ ಅನುಷ್ಠಾನಕ್ಕೆ ತರಲಾಗಿದೆ.
ಇದನ್ನೂ ಓದಿ: ವಿಪರೀತ ತಾಪಮಾನದ ಪರಿಣಾಮ| ಈಗ ಜನಿಸುತ್ತಿರುವ ಕಡಲಾಮೆಗಳೆಲ್ಲ ಹೆಣ್ಣೆ, ಕಾದಿದೆ ಅಪಾಯ!