ತಿರುಪತಿ: ಕೋವಿಡ್-19 ಮಹಾಮಾರಿ ಎಫೆಕ್ಟ್ ಸಪ್ತಗಿರಿವಾಸ ತಿರುಮಲ ತಿಮ್ಮಪ್ಪನ ಭಕ್ತರಿಗೂ ತಟ್ಟಿತ್ತು. ಕರೊನಾ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಬಾಲಾಜಿಯ ದರ್ಶನ ಪಡೆಯಲಾಗದೆ ಭಕ್ತರು ಪರದಾಡುವಂತಾಗಿತ್ತು. ಇದೀಗ ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಳಿ ವೆಂಕಟೇಶ್ವರನ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ ಭಕ್ತರಿಗೆ ಪ್ರತಿನಿತ್ಯ 60 ಸಾವಿರ ಟಿಕೆಟ್‌ಗಳನ್ನು ವಿತರಿಸಲು ಟಿಟಿಡಿ ನಿರ್ಧರಿಸಿದೆ. ಪ್ರತಿನಿತ್ಯ 30 ಸಾವಿರ ಸರ್ವದರ್ಶನಂ ಟೋಕನ್‌ಗಳನ್ನು ಆಫ್‌ಲೈನ್‌ನಲ್ಲಿ ಭಕ್ತರಿಗೆ ವಿತರಿಸಲು ಟಿಟಿಡಿ ಮುಂದಾಗಿದೆ. ತಿರುಪತಿಯ ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸ ಕಾಂಪ್ಲೆಕ್ಸ್, ಶ್ರೀ ಗೋವಿಂದರಾಜಸ್ವಾಮಿ ಛತ್ರದಲ್ಲಿ ಸರ್ವದರ್ಶನಂ ಟೋಕನ್‌ಗಳನ್ನು ವಿತರಿಸುವುದಾಗಿ ಟಿಟಿಡಿ ತಿಳಿಸಿದೆ.
ಏಪ್ರಿಲ್, ಮೇ, ಜೂನ್ ತಿಂಗಳ 300 ರೂಪಾಯಿ ಪ್ರತ್ಯೇಕ ಪ್ರವೇಶ ದರ್ಶನದ ಟಿಕೆಟ್‌ಗಳನ್ನು ಮಾರ್ಚ್ 21ರಿಂದ ಆನ್‌ಲೈನ್‌ನಲ್ಲಿ ವಿತರಿಸುವುದಾಗಿ ಟಿಟಿಡಿ ತಿಳಿಸಿದೆ. ಮಾರ್ಚ್ 21ರಿಂದ 3 ದಿನಗಳ ಕಾಲ ಟಿಟಿಡಿ ಆನ್‌ಲೈನ್‌ನಲ್ಲಿ ವಿಶೇಷ ದರ್ಶನದ ಟಿಕೆಟ್‌ಗಳು ಸಿಗಲಿವೆ. ಏಪ್ರಿಲ್ ತಿಂಗಳ ಪ್ರತ್ಯೇಕ ಪ್ರವೇಶ ದರ್ಶನದ ಟಿಕೆಟ್, ಮೇ ತಿಂಗಳ ವಿಶೇಷ ದರ್ಶನ ಟಿಕೆಟ್‌ಗಳನ್ನ ಮಾರ್ಚ್ 22 ಹಾಗೂ ಮಾರ್ಚ್ 23ರಂದು ಜೂನ್ ತಿಂಗಳ ಶ್ರೀವಾರಿ ದರ್ಶನದ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ವಿತರಿಸಲು ಟಿಟಿಡಿ ಸಿದ್ಧತೆ ಮಾಡಿಕೊಂಡಿದೆ.
ಮಾರ್ಚ್ 21ರಿಂದ 3 ದಿನಗಳ ಕಾಲ ಅಂದ್ರೆ ಪ್ರತಿನಿತ್ಯ 30 ಸಾವಿರ ಪ್ರತ್ಯೇಕ ಪ್ರವೇಶ ದರ್ಶನದ ಟಿಕೆಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಮಾರ್ಚ್ 24 ರಿಂದ 27ರವರೆಗೆ ಅಂದರೆ ವಾರಾಂತ್ಯದಲ್ಲಿ ಪ್ರತಿನಿತ್ಯ 25 ಸಾವಿರ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ವಿತರಿಸಲು ತೀರ್ಮಾನಿಸಲಾಗಿದೆ.