ಹೈದರಾಬಾದ್: ತಡರಾತ್ರಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬಿಹಾರ ಮೂಲದ 11 ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಸಿಕಂದ್ರಾಬಾದ್‌ನ ಬೊಯಗೂಡ ಎಂಬಲ್ಲಿ ನಡೆದಿದೆ.
ತಡರಾತ್ರಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಈ ದುರ್ಘಟನೆಯಲ್ಲಿ ಗೋದಾಮಿನಲ್ಲಿದ್ದ 11 ಕಾರ್ಮಿಕರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಓರ್ವ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ 8 ಅಗ್ನಿಶಾಮಕ ದಳದ ವಾಹನಗಳು ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಘಡಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಪೊಲೀಸರ ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕರೆಲ್ಲರೂ ಬಿಹಾರದವರು ಎಂದು ತಿಳಿದುಬಂದಿದೆ. ಕಾರ್ಮಿಕರ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇನ್ನು, ಅಗ್ನಿ ಅವಘಡಕ್ಕೆ ನಿಖರ ಕಾರಣ ಏನು ಎಂಬುದರ ತನಿಖೆ ನಡೆಸುವಂತೆ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
ಬೊಯಗೂಡ ಗೋದಾಮು ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.