Site icon Vistara News

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Hajj Pilgrims

ಮೆಕ್ಕಾ: ಸೌದಿ ಅರೇಬಿಯಾದ (Saudi Arabia) ಮೆಕ್ಕಾದಲ್ಲಿರುವ ಮುಸ್ಲಿಮರ ಪವಿತ್ರ ಹಜ್‌ ಯಾತ್ರೆ ಕೈಗೊಂಡಿರುವವರಿಗೆ ಬೇಸಿಗೆಯ ಬಿಸಿಲು, ಬಿಸಿಗಾಳಿಯ ಹೊಡೆತವು ಮಾರಣಾಂತಿಕವಾಗಿ ಪರಿಣಮಿಸಿದೆ. ಬಿಸಿಗಾಳಿ ಸಂಬಂಧಿತ ಕಾಯಿಲೆಯಿಂದ ಮೆಕ್ಕಾದಲ್ಲಿ (Mecca) 550ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದು, ಮೃತರಲ್ಲಿ ಭಾರತದ 68 ಯಾತ್ರಿಕರು (Hajj Pilgrims) ಇದ್ದಾರೆ ಎಂದು ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಭಾರತದ 68 ಯಾತ್ರಿಕರು ಮೃತಪಟ್ಟಿರುವುದು ದೃಢವಾಗಿದೆ. ಇವರಲ್ಲಿ ಕೆಲವು ಜನ ವಯೋಸಹಜ ಕಾಯಿಲೆಯಿಂದ ಮೃತಪಟ್ಟರೆ, ಹೆಚ್ಚಿನ ಜನ ಉಷ್ಣಗಾಳಿ ಸಂಬಂಧಿತ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ” ಎಂಬುದಾಗಿ ರಾಜತಾಂತ್ರಿಕ ಅಧಿಕಾರಿಗಳು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಈ ಕಾರಣಕ್ಕೆ ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸೋಮವಾರ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.

ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, 60 ಮಂದಿ ಜೋರ್ಡಾನ್‌ನವರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಇನ್ನು ತನ್ನ ದೇಶದ ಐವರು ಯಾತ್ರಿಕರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಹೇಳಿದ್ದು, ಕಾರಣವನ್ನು ಬಹಿರಂಗಪಡಿಸಿಲ್ಲ. ಸೆನೆಗಲ್ ಮೂರು ಸಾವುಗಳನ್ನು ವರದಿ ಮಾಡಿದೆ. ಹಜ್ ಸಮಯದಲ್ಲಿ 136 ಇಂಡೋನೇಷ್ಯಾದ ಯಾತ್ರಿಕರು ಮತಪಟ್ಟಿದ್ದಾರೆ, ಇದರಲ್ಲಿ ಕನಿಷ್ಠ ಮೂವರು ಶಾಖದ ಹೊಡೆತದಿಂದ ನಿಧನರಾಗಿದ್ದಾರೆ ಎಂದು ಅಲ್ಲಿನ ಅದಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೌದಿ ಅರೇಬಿಯಾದ ಅಧಿಕಾರಿಗಳು ಶಾಖದ ಒತ್ತಡದಿಂದ ಬಳಲುತ್ತಿರುವ 2,000ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಕಳೆದ ವರ್ಷ ಇಲ್ಲಿ ವಿವಿಧ ದೇಶಗಳಲ್ಲಿ ಕನಿಷ್ಠ 240 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ಪೈಕಿ ಹೆಚ್ಚಿನವರು ಇಂಡೋನೇಷ್ಯಾದವರು. ಈ ವರ್ಷ ಸುಮಾರು 18,00,000 ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಆ ಪೈಕಿ 16,00,000 ವಿದೇಸಿಗರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಹಜ್ ವೀಸಾ ದುಬಾರಿಯಾದ ಕಾರಣ ಪ್ರತಿವರ್ಷ ಸಾವಿರಾರು ಯಾತ್ರಿಕರು ಅಕ್ರಮವಾಗಿಯೂ ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಹಜ್‌ ಯಾತ್ರೆಯಲ್ಲಿ ಪಾಕಿಸ್ತಾನದ ಜೇಬುಗಳ್ಳರ ಕಾಟ; ಸೌದಿ ಅರೇಬಿಯಾ ಖಡಕ್ ವಾರ್ನಿಂಗ್‌

Exit mobile version