Site icon Vistara News

Note Ban: ನೋಟು ನಿಷೇಧಕ್ಕೆ 7 ವರ್ಷ, ಈಗಲೂ ಆಸ್ತಿ ಖರೀದಿಗೆ ನೋಟುಗಳ ಬಳಕೆ ಹೆಚ್ಚು!

Cash

ನವದೆಹಲಿ: ದೇಶದಲ್ಲಿ ಐನೂರು ಹಾಗೂ ಸಾವಿರ ರೂ. ಮೌಲ್ಯದ ನೋಟುಗಳನ್ನು ನಿಷೇಧಿಸಿ (Note Ban) ನವೆಂಬರ್‌ 8ಕ್ಕೆ 7 ವರ್ಷ ತುಂಬಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್‌ 8ರಂದು ನೋಟು ನಿಷೇಧ ಘೋಷಿಸಿದ ಬಳಿಕ ಹಲವು ಬದಲಾವಣೆ ಆಗಿವೆ. ಏಕೀಕೃತ ಪಾವತಿ ವ್ಯವಸ್ಥೆ (UPI) ಜಾರಿಗೆ ಬಂದು, ನಾವೆಲ್ಲ ಈಗ ಊಟ-ತಿಂಡಿ ಸೇವಿಸಿದ್ದಕ್ಕೂ ಆನ್‌ಲೈನ್‌ (Online Payment) ಮೂಲಕ ಹಣ ಪಾವತಿಸುತ್ತಿದ್ದೇವೆ. ಆದರೆ, ನೋಟು ನಿಷೇಧಗೊಳಿಸಿ 7 ವರ್ಷ ತುಂಬಿದರೂ ಇಂದಿಗೂ ಭೂಮಿ, ಆಸ್ತಿ, ನಿವೇಶನ, ಮನೆ, ಕಚೇರಿಗಳ ಖರೀದಿಗೆ ನೋಟುಗಳನ್ನೇ (Cash Payment) ಬಳಸಲಾಗುತ್ತಿದೆ ಎಂದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಲೋಕಲ್‌ಸರ್ಕಲ್ಸ್‌ ಎಂಬ ಸಂಸ್ಥೆಯು ಸಮೀಕ್ಷೆ ನಡೆಸಿದ್ದು, ಈಗಲೂ ಶೇ.15ರಷ್ಟು ಜನ ಆಸ್ತಿ, ಜಮೀನು, ಕಚೇರಿ ಖರೀದಿಗೆ ಶೇ.50ರಷ್ಟು ಮೊತ್ತವನ್ನು ನೋಟುಗಳಲ್ಲೇ (Hard Cash) ನೀಡುತ್ತಾರೆ ಎಂದು ತಿಳಿದುಬಂದಿದೆ. ಕಡಿಮೆ ಮೊತ್ತದ ಆಸ್ತಿ ಖರೀದಿಗೆ ಶೇ.10-30ರಷ್ಟು ನಗದು ಪಾವತಿ ಮಾಡಲಾಗುತ್ತದೆ. ಇನ್ನು ಶೇ.24ರಷ್ಟು ಜನ ಮಾತ್ರ ಎಲ್ಲ ಹಣವನ್ನು ಮಾಲೀಕರ ಬ್ಯಾಂಕ್‌ ಖಾತೆಗೆ ವರ್ಗಾಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ದೇಶದ 363 ಜಿಲ್ಲೆಗಳ 44 ಸಾವಿರ ಜನರನ್ನು ಸಂಪರ್ಕಿಸಿ ವರದಿ ತಯಾರಿಸಲಾಗಿದೆ. ಇವರಲ್ಲಿ ಶೇ.67ರಷ್ಟು ಪುರುಷರು ಹಾಗೂ ಶೇ.33ರಷ್ಟು ಮಹಿಳೆಯರು ಇದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಆಸ್ತಿ, ಜಮೀನು, ಗೃಹೋಪಯೋಗಿ ವಸ್ತುಗಳ ಖರೀದಿಗೆ ನಗದು ಬಳಸುತ್ತೀರಾ ಅಥವಾ ಯುಪಿಐ ಪಾವತಿ ಮಾಡುತ್ತೀರಾ ಎಂಬುದು ಸೇರಿ ಹಲವು ಪ್ರಶ್ನೆಗಳನ್ನು ಕೇಳಿ, ಅವರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ತಯಾರಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಜನರೂ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.

ಆಸ್ತಿ ಖರೀದಿಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ನಗದು ಪಾವತಿಯಾಗುತ್ತಿದೆ ಹಾಗೂ ಅದು ದಿನೇದಿನೆ ಜಾಸ್ತಿಯಾಗುತ್ತಿದೆ. ಎರಡು ವರ್ಷದ ಹಿಂದೆ ಶೇ.30ರಷ್ಟು ಜನ ಆನ್‌ಲೈನ್‌ ಅಥವಾ ಬ್ಯಾಂಕ್‌ ಟ್ರಾನ್ಸ್‌ಫರ್‌ ಮೂಲಕ ಹಣ ಪಾವತಿಸುತ್ತಿದ್ದರು. ಈಗ ಆ ಪ್ರಮಾಣವು ಶೇ.24ಕ್ಕೆ ಇಳಿದಿದೆ. ಬಹುತೇಕ ಜನ ನಗದು ಮೂಲಕವೇ ಪಾವತಿಸುತ್ತಿದ್ದಾರೆ.

ರಶೀದಿ ಪಡೆಯದ ನಾಗರಿಕರು

ಗೃಹೋಪಯೋಗಿ ವಸ್ತುಗಳ ಖರೀದಿ ವೇಳೆ ಪಾವತಿ ಕುರಿತು 11,189 ಜನರಿಗೆ ಪ್ರಶ್ನೆ ಕೇಳಲಾಗಿದೆ. ಇವರಲ್ಲಿ ಶೇ.15ರಷ್ಟು ಜನ ಮಾತ್ರ ವಹಿವಾಟಿನ ವೇಳೆ ನಗದು ಬಳಸುವುದಿಲ್ಲ ಎಂದಿದ್ದಾರೆ. ಶೇ.3ರಷ್ಟು ಮಂದಿ “ಹೇಳಲು ಆಗುವುದಿಲ್ಲ” ಎಂದಿದ್ದಾರೆ. ಇನ್ನು ಶೇ.56ರಷ್ಟು ಜನ ಖರೀದಿ ವೇಳೆ ಶೇ.5-25ರಷ್ಟು ಉತ್ಪನ್ನಗಳಿಗೆ ರಶೀದಿ ಪಡೆಯುವುದಿಲ್ಲ ಎಂದಿದ್ದಾರೆ. ಇವರೆಲ್ಲ ನಗದು ಮೂಲಕವೇ ಪಾವತಿಸಿ, ರಶೀದಿ ಪಡೆಯುವುದಿಲ್ಲ.

ಇದನ್ನೂ ಓದಿ: Demonetisation | ನೋಟು ನಿಷೇಧದ ಕುರಿತು ಲಿಖಿತ ಮಾಹಿತಿ ನೀಡಿ, ಕೇಂದ್ರ, ಆರ್‌ಬಿಐಗೆ ಸುಪ್ರೀಂ ನಿರ್ದೇಶನ

ಸಣ್ಣ ಮೊತ್ತವೂ ನಗದು ಮೂಲಕ ಪಾವತಿ

ಸಲೂನ್‌ಗೆ ಹೋದಾಗ, ಮನೆಗೆಲಸದವರಿಗೆ ಸಂಬಳ ನೀಡುವುದು ಅಥವಾ ಮನೆಯಲ್ಲಿ ಸಣ್ಣ-ಪುಟ್ಟ ರಿಪೇರಿ ಮಾಡುವವರಿಗೆ ಜನ ನಗದು ನೀಡುತ್ತಿದ್ದಾರೆ. ರಶೀದಿ ನೀಡದೆಯೇ ಮನೆಗೆಲಸದವರಿಗೆ ಸಂಬಳ ನೀಡುವುದು, ರಶೀದಿ ಪಡೆಯದೆಯೇ ಮನೆ ದುರಸ್ತಿ ಮಾಡಿಸುವವರ ಪ್ರಮಾಣ ಶೇ.34ರಷ್ಟಿದೆ. ಪ್ರವಾಸಕ್ಕೂ ನಗದು ಬಳಸುವವರ ಪ್ರಮಾಣ ಶೇ.18ರಷ್ಟಿದೆ ಎಂದು ವರದಿ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version