Site icon Vistara News

70 hour work: ಸುದೀರ್ಘ ಗಂಟೆಗಳ ಕೆಲಸದ ಪರ ಉದ್ಯಮಿ ನೀರಜ್‌ ಶಾ ಬ್ಯಾಟಿಂಗ್‌

narayanmurthy niraj shah

ನ್ಯೂಯಾರ್ಕ್‌: ಇನ್ಫೋಸಿಸ್‌ ಸ್ಥಾಪಕ (Infosys co-founder) ನಾರಾಯಣ ಮೂರ್ತಿ (NR Narayana Murthy) ಅವರ ʼವಾರಕ್ಕೆ 70 ಗಂಟೆಗಳ ಕೆಲಸʼದ (70 hour work per week) ಕರೆಯನ್ನು ಮತ್ತೊಬ್ಬ ಉದ್ಯಮಿ ಬೆಂಬಲಿಸಿದ್ದಾರೆ. ಆನ್‌ಲೈನ್ ಪೀಠೋಪಕರಣ ಸಂಸ್ಥೆ ವೇಫೇರ್‌ನ (Wayfair) ಭಾರತೀಯ-ಅಮೆರಿಕನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನೀರಜ್ ಷಾ (Niraj Shah), ʼಜೀವನದೊಂದಿಗೆ ಕೆಲಸ ಮಾಡಿʼ ಎಂದು ತಮ್ಮ ಉದ್ಯೋಗಿಗಳಿಗೆ ಕರೆ ನೀಡಿದ್ದಾರೆ.

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಇತ್ತೀಚೆಗೆ ಯುವಜನರನ್ನು ವಾರಕ್ಕೆ 70 ಗಂಟೆಗಳ ಕಾಲ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಇದೀಗ ನೀರಜ್‌ ಶಾ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಈ ಬಗ್ಗೆ ಟಿಪ್ಪಣಿಯ ಇಮೇಲ್‌ ಕಳಿಸಿದ್ದಾರೆ.

ʼಗೆಲುವಿಗೆ ಕಠಿಣ ಪರಿಶ್ರಮ ಅಗತ್ಯ. ನಮ್ಮಲ್ಲಿ ಹೆಚ್ಚಿನವರು ಮಹತ್ವಾಕಾಂಕ್ಷೆಯ ವ್ಯಕ್ತಿಗಳಾಗಿರುವುದರಿಂದ, ನಮ್ಮ ಪ್ರಯತ್ನಗಳು ಸ್ಪಷ್ಟವಾದ ಫಲಿತಾಂಶಗಳಾಗಿ ಕಾರ್ಯರೂಪಕ್ಕೆ ಬರುವುದನ್ನು ನೋಡಿದ ಸಂತೋಷದಲ್ಲಿ ಪೂರ್ಣತೆಯನ್ನು ಕಂಡುಕೊಳ್ಳುತ್ತೇವೆ. ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವುದು, ಸ್ಪಂದಿಸುವುದು, ಕೆಲಸ ಮತ್ತು ಜೀವನವನ್ನು ಸಂಯೋಜಿಸುವುದು ಇವೆಲ್ಲ ನಾಚಿಕೆಪಡುವ ಸಂಗತಿಯಲ್ಲ. ಸೋಮಾರಿತನವನ್ನು ಯಶಸ್ಸು ಪುರಸ್ಕರಿಸಿದ ಇತಿಹಾಸವಿಲ್ಲʼ ಎಂದವರು ಹೇಳಿದ್ದಾರೆ.

ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದರ ಕುರಿತು ಅವರು ಒಳನೋಟಗಳನ್ನು ಹಂಚಿಕೊಂಡಿದ್ದಾರೆ. “ಬೆಲೆಗಳ ಬಗ್ಗೆ ನೀವು ಮಾತುಕತೆ ನಡೆಸಬೇಕು. ನೀವು ಹಣವನ್ನು ಯಾವುದಕ್ಕಾಗಿ ಖರ್ಚು ಮಾಡುತ್ತೀರೋ ಅದಕ್ಕೆ ನೀವು ಅಷ್ಟು ಹಣವನ್ನು ಖರ್ಚು ಮಾಡುವುದು ಸಮಂಜಸವೇ ಎಂದು ವಿಮರ್ಶಿಬೇಕು” ಎಂದಿದ್ದಾರೆ.

ವೇಫೇರ್ ಸಂಸ್ಥೆಯು ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ಲ್ಲಿರುವ ಇ-ಕಾಮರ್ಸ್ ಕಂಪನಿ. 2022ರಲ್ಲಿ, ಕಂಪನಿಯು ವೆಚ್ಚವನ್ನು ಉಳಿಸಲು ತನ್ನಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 5ರಷ್ಟು ಕಡಿತಗೊಳಿಸಿತು. ಸಿಇಒ ಟಿಪ್ಪಣಿ ಪ್ರಕಾರ ಕಂಪನಿ ಈಗ ಲಾಭದಲ್ಲಿದೆ. ʼʼನಾವೆಲ್ಲರೂ ಒಟ್ಟಾಗಿ ಈ ದಿಕ್ಕಿನಲ್ಲಿ ಸಾಗಿದರೆ ನಾವು ಈಗ ಗೆಲ್ಲುವುದಕ್ಕಿಂತ ಹೆಚ್ಚು ವೇಗವಾಗಿ ಗೆಲ್ಲಬಹುದು. ನಮ್ಮ ನಡೆ ಆಕ್ರಮಣಕಾರಿ, ಪ್ರಾಯೋಗಿಕ, ಮಿತವ್ಯಯ, ಚುರುಕುಬುದ್ಧಿಯ, ಗ್ರಾಹಕ-ಆಧಾರಿತ ಮತ್ತು ಸ್ಮಾರ್ಟ್ ಆಗಿರಬೇಕು” ಎಂದಿದ್ದಾರೆ ನೀರಜ್‌ ಶಾ.

ಇದನ್ನೂ ಓದಿ: ಮೂರ್ತಿಯಂತೆ 70 ಗಂಟೆ, ಬಿಲ್‌ ಗೇಟ್ಸ್‌ರಂತೆ 3 ದಿನ ಅಲ್ಲ; ಕೆಲಸಕ್ಕೆ ಶಶಿ ತರೂರ್‌ ಸೊಲ್ಯೂಷನ್ ಇಲ್ಲಿದೆ!

Exit mobile version