ಒಟ್ಟಾವ: ವಿದೇಶದಲ್ಲಿ ದೊರೆಯುವ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣ ಪಡೆಯಬೇಕು, ಅದಾದ ಬಳಿಕ ಒಳ್ಳೆಯ ಉದ್ಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ಭಾರತದಿಂದ ವಿದೇಶಕ್ಕೆ ಹಾರುವ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಹೀಗೆ, ಉಜ್ವಲ ಭವಿಷ್ಯದ ಕನಸು ಇಟ್ಟುಕೊಂಡು ಕೆನಡಾಗೆ ತೆರಳಿದ ಭಾರತದ ಸುಮಾರು 700 ವಿದ್ಯಾರ್ಥಿಗಳಿಗೆ ಗಡಿಪಾರು (Indian Students In Canada) ಭೀತಿ ಎದುರಾಗಿದೆ. ಭಾರತದ 700 ವಿದ್ಯಾರ್ಥಿಗಳು ಹೊಂದಿರುವ ವೀಸಾ ಹಾಗೂ ದಾಖಲಾತಿ ಪ್ರಮಾಣಪತ್ರಗಳು ನಕಲಿ ಎಂಬುದನ್ನು ಕೆನಡಾ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಹಾಗಾಗಿ, ಭಾರತದ ವಿದ್ಯಾರ್ಥಿಗಳನ್ನು ಶೀಘ್ರದಲ್ಲೇ ಗಡಿಪಾರು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
2018-19ರಲ್ಲಿ ಉನ್ನತ ಶಿಕ್ಷಣ ಪಡೆಯಲು ಕೆನಡಾಗೆ ತೆರಳಿದ ಸಾವಿರಾರು ವಿದ್ಯಾರ್ಥಿಗಳಲ್ಲಿ ಒಂದಷ್ಟು ಜನರ ವಿದ್ಯಾಭ್ಯಾಸ ಪೂರ್ಣಗೊಂಡಿದೆ. ಇನ್ನೂ ಕೆಲವರು ಕೆಲಸಕ್ಕೂ ಸೇರಿ, ಉದ್ಯೋಗದ ಅನುಮತಿ ಪಡೆದಿದ್ದಾರೆ. ಇವರಲ್ಲಿ ಒಂದಷ್ಟು ಜನ ಕೆನಡಾದಲ್ಲಿಯೇ ವಾಸಿಸಲು ಕಾಯಂ ವೀಸಾಗೆ ಅರ್ಜಿ ಸಲ್ಲಿಸಿದಾಗ ಭಾರತದ 700 ವಿದ್ಯಾರ್ಥಿಗಳ ವೀಸಾ ಹಾಗೂ ದಾಖಲಾತಿ ಪ್ರಮಾಣಪತ್ರಗಳೇ ನಕಲಿ ಎಂಬುದು ಗೊತ್ತಾಗಿದೆ. ಕೆನಡಿಯನ್ ಬಾರ್ಡರ್ ಸೆಕ್ಯುರಿಟಿ ಏಜೆನ್ಸಿಯು (CBSA) ಈಗಾಗಲೇ ವಿದ್ಯಾರ್ಥಿಗಳಿಗೆ ಗಡಿಪಾರು ಪತ್ರಗಳನ್ನು ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಯಲಾಯ್ತು ಪಂಜಾಬ್ ವೀಸಾ ದಂಧೆ
ಕೆನಡಾದಲ್ಲಿ ನಕಲಿ ದಾಖಲೆಗಳ ಸಲ್ಲಿಕೆ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ 700 ವಿದ್ಯಾರ್ಥಿಗಳು ಬಹುತೇಕ ವಿದ್ಯಾರ್ಥಿಗಳು ಪಂಜಾಬ್‌ನವರೇ ಆಗಿದ್ದಾರೆ. ಹಾಗಾಗಿ, ಪಂಜಾಬ್‌ನಲ್ಲಿ ನಕಲಿ ವೀಸಾ ದಂಧೆ ನಡೆದಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಜಲಂಧರ್ ಮೂಲದ ಎಜುಕೇಷನ್ ಆ್ಯಂಡ್ ಮೈಗ್ರೇಷನ್ ಸರ್ವಿಸಸ್ ಸಂಸ್ಥೆಯ ಮೂಲಕವೇ ಪಡೆದ ವೀಸಾಗಳು ನಕಲಿ ಎಂಬುದು ತಿಳಿದುಬಂದಿದ್ದು, ಇದರ ಮಾಲೀಕ ಬ್ರಿಜೇಶ್ ಮಿಶ್ರಾ ದಂಧೆಕೋರ ಎಂದು ಹೇಳಲಾಗುತ್ತಿದೆ.
ಬಿಹಾರ ಮೂಲದ ಬ್ರಿಜೇಶ್ ಮಿಶ್ರಾ ಜಲಂಧರ್‌ನಲ್ಲಿ ಎಜುಕೇಷನ್ ಆ್ಯಂಡ್ ಮೈಗ್ರೇಷನ್ ಸರ್ವಿಸಸ್ ಸಂಸ್ಥೆ ನಡೆಸುತ್ತಿದ್ದು, 2018-19ರಲ್ಲಿ ಕೆನಡಾಗೆ ತೆರಳಿದ ವಿದ್ಯಾರ್ಥಿಗಳಿಗೆ ವೀಸಾ ಕೊಡಿಸಿದ್ದಾನೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಶುಲ್ಕ ಸೇರಿ 16 ಲಕ್ಷ ರೂಪಾಯಿ ಪಡೆದಿದ್ದಾನೆ. ಈಗ ಈತ ನೀಡಿದ ವೀಸಾಗಳು ನಕಲಿ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಜಲಂಧರ್ ಜಿಲ್ಲಾಧಿಕಾರಿಯು ಸಂಸ್ಥೆಯ ಪರವಾನಗಿ ರದ್ದುಗೊಳಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಕೇಂದ್ರದ ಮಧ್ಯಸ್ಥಿಕೆಗೆ ಅಕಾಲಿ ದಳ ಮನವಿ
ಇದರ ಬೆನ್ನಲ್ಲೇ ಕೆನಡಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತದ ವಿದ್ಯಾರ್ಥಿಗಳ ನೆರವಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೆರವಿಗೆ ಬರಬೇಕು ಎಂದು ಶಿರೋಮಣಿ ಅಕಾಲಿ ದಳ (SAD) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ, ವಿದ್ಯಾರ್ಥಿಗಳಿಗೆ ನೆರವು ನೀಡಬೇಕು ಎಂಬುದಾಗಿ ಕೋರಿದ್ದಾರೆ. ಇದುವರೆಗೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: Fake Documents | ವೀಸಾಕ್ಕೆ ಭಾರತದ ವಿದ್ಯಾರ್ಥಿಗಳು ನಕಲಿ ದಾಖಲೆ ನೀಡುತ್ತಾರಾ? ಜರ್ಮನಿ ರಾಯಭಾರಿ ಹೇಳಿದ್ದೇನು?