Site icon Vistara News

DA Hike: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ‌ ಭರ್ಜರಿ ಗಿಫ್ಟ್; ತುಟ್ಟಿಭತ್ಯೆ ಹೆಚ್ಚಳ!

Dearness Allowance

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ದಸರಾ ಹಬ್ಬದ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರರಿಗೆ ಸರ್ಕಾರವು ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದು (DA Hike), ಇದರಿಂದಾಗಿ ಲಕ್ಷಾಂತರ ನೌಕರರಿಗೆ ಭಾರಿ ಅನುಕೂಲವಾಗಲಿದೆ. ತುಟ್ಟಿಭತ್ಯೆ ಹೆಚ್ಚಿಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, ಕೆಲವೇ ಗಂಟೆಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ತಿಳಿದುಬಂದಿದೆ.

ಕಳೆದ ಮಾರ್ಚ್‌ನಲ್ಲಷ್ಟೇ ಕೇಂದ್ರ ಸರ್ಕಾರವು ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿತ್ತು. ಇದರಿಂದ ನೌಕರರಿಗೆ ಸಿಗುವ ತುಟ್ಟಿಭತ್ಯೆಯು ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿತ್ತು. ಈಗ ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.42ರಿಂದ ಶೇ.46ಕ್ಕೆ ಏರಿಕೆ ಮಾಡಲಾಗಿದೆ. ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ನೀಡಲಾಗುತ್ತದೆ. ಜುಲೈನಿಂದಲೂ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಏರಿಕೆಯ ನಿರೀಕ್ಷೆಯಲ್ಲಿದ್ದರು. ಈಗ ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಜನರಿಗೆ ಸರ್ಕಾರವು ತುಟ್ಟಿಭತ್ಯೆಯ ಗಿಫ್ಟ್‌ ನೀಡಿದೆ.

ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುತ್ತದೆ. ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಇದು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ನೀಡುತ್ತದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ

ಮಂಗಳವಾರವಷ್ಟೇ (ಅಕ್ಟೋಬರ್‌ 17) ಕೇಂದ್ರ ಸರ್ಕಾರವು ಗ್ರೂಪ್‌ ಸಿ ನೌಕರರು, ನಾನ್‌-ಗೆಜೆಟೆಡ್‌ ಗ್ರೂಫ್‌ ಬಿ ಬ್ಯಾಂಕ್‌ ನೌಕರರಿಗೆ ಬೋನಸ್‌ ಘೋಷಿಸಿದೆ. ಆಯಾ ನೌಕರರ ಕಾರ್ಯಕ್ಷಮತೆ, ಸೇವಾ ಮನೋಭಾವ, ದಕ್ಷತೆ, ಸಮಯಪಾಲನೆ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಗರಿಷ್ಠ 7 ಸಾವಿರ ರೂಪಾಯಿವರೆಗೆ ಸರ್ಕಾರ ಬೋನಸ್‌ ನೀಡುತ್ತದೆ. ಇದರಿಂದ ನೌಕರರು ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತದೆ.

Exit mobile version