Site icon Vistara News

Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Gratuity

7th Pay Commission: Gratuity, Children Education Allowance, Hostel Subsidy To Increase 25% for Govt Employees

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು (Central Government) ಮತ್ತೊಂದು ಗುಡ್‌ ನ್ಯೂಸ್‌ ನೀಡಲು ಸಜ್ಜಾಗಿದೆ. ಕಳೆದ ಜನವರಿಯಲ್ಲಿಯೇ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದ್ದ ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ನೌಕರರ ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್‌ ಸಬ್ಸಿಸಿ, ನಿವೃತ್ತಿ ಗ್ರಾಚ್ಯುಟಿ (Gratuity) ಹಾಗೂ ಸಾವಿನ ಗ್ರಾಚ್ಯುಟಿಯನ್ನು ಶೇ.25ರಷ್ಟು ಏರಿಕೆ ಮಾಡಲಿದೆ ಎಂದು ತಿಳಿದುಬಂದಿದೆ. ಇದರಿಂದ ಲಕ್ಷಾಂತರ ನೌಕರರು (Government Employees) ಸೌಲಭ್ಯಗಳನ್ನು ಪಡೆಯಲಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಏರಿಕೆ ಮಾಡಲಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವಾಗುತ್ತಲೇ ಅವರ ಮಕ್ಕಳ ಶಿಕ್ಷಣ ಭತ್ಯೆ ಹಾಗೂ ಹಾಸ್ಟೆಲ್‌ ಸಬ್ಸಿಡಿ ಕೂಡ ಜಾಸ್ತಿಯಾಗುತ್ತದೆ. ಅದರಂತೆ, ಕೇಂದ್ರ ಸರ್ಕಾರವು ಶೀಘ್ರದಲ್ಲೇ ಈ ಕುರಿತು ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ. ಹೊಸ ಆದೇಶದ ಬಳಿಕ ರಿಟೈರ್‌ಮೆಂಟ್‌ ಗ್ರಾಚ್ಯುಟಿ ಮೊತ್ತವು ಶೇ.25ರಷ್ಟು ಅಂದರೆ, 20 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

Cash

ಕೇಂದ್ರ ಸರ್ಕಾರಿ ನೌಕರರಿಗೆ ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಬಂಪರ್‌ ಕೊಡುಗೆ ನೀಡಿತ್ತು. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಏರಿಕೆ ಮಾಡಿತ್ತು. ಇದರೊಂದಿಗೆ ನೌಕರರಿಗೆ ನೀಡುತ್ತಿರುವ ತುಟ್ಟಿಭತ್ಯೆಯು ಶೇ.50ರಷ್ಟು ಆಗಿದೆ. ತುಟ್ಟಿ ಭತ್ಯೆಯ ಜತೆಗೆ ಕೇಂದ್ರ ಸರ್ಕಾರವು ಮನೆ ಬಾಡಿಗೆ ಅಲೋವನ್ಸ್‌ (HRA) ಕೂಡ ಏರಿಕೆ ಮಾಡಿತ್ತು. ಇದರೊಂದಿಗೆ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 12,868 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಖರ್ಚುವಾಗಲಿದೆ. 2024ರ ಜನವರಿ 1ರಿಂದಲೇ ತುಟ್ಟಿಭತ್ಯೆ ಹೆಚ್ಚಳವು ಅನ್ವಯವಾಗಿದೆ.

ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುತ್ತದೆ. ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಇದು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ನೀಡುತ್ತದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿದೆ ಎಂದು ತಿಳಿದುಬಂದಿತ್ತು.

2023ರ ಮಾರ್ಚ್‌ನಲ್ಲೂ ಕೇಂದ್ರ ಸರ್ಕಾರವು ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿತ್ತು. ಇದರಿಂದ ನೌಕರರಿಗೆ ಸಿಗುವ ತುಟ್ಟಿಭತ್ಯೆಯು ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿತ್ತು. ಅಲ್ಲದೆ, ಕಳೆದ ವರ್ಷದ ಜುಲೈನಲ್ಲಿ ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.42ರಿಂದ ಶೇ.46ಕ್ಕೆ ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: LPG Price Cut: ತಿಂಗಳ ಆರಂಭದಲ್ಲೇ ಗುಡ್‌ನ್ಯೂಸ್‌; ಎಲ್‌ಪಿಜಿ ಬೆಲೆ 19 ರೂ. ಇಳಿಕೆ

Exit mobile version