ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಎಂಟನೇ ಗವರ್ನಿಂಗ್ ಸಮಿತಿ ಸಭೆ (Governing Council Meeting) ನಡೆದಿದ್ದು, ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧದ ಆಕ್ರೋಶ, ಮುನಿಸಿನಿಂದಾಗಿ 10 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿರುವ ಸಭೆಗೆ ಸಿಎಂಗಳು ಗೈರಾಗಿರುವುದು ಆಯಾ ರಾಜ್ಯಗಳಿಗೇ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ನೀತಿ ಆಯೋಗದ ಸಭೆಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ 100 ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು, ಕೇಂದ್ರ ಸಚಿವರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲಾಗಿದೆ. ಎಂಎಸ್‌ಎಂಇ, ಮೂಲ ಸೌಕರ್ಯ, ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ, ಕೌಶಲಾಭಿವೃದ್ಧಿ ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಕೆಲವು ರಾಜ್ಯಗಳು ಕೂಡ ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಿವೆ. ಏಳಿಗೆ ದಿಸೆಯಲ್ಲಿಯೇ ಪ್ರಮುಖ ತೀರ್ಮಾನಗಳನ್ನೂ ತೆಗೆದುಕೊಳ್ಳಲಾಗಿದೆ. ಈಗ ಗೈರಾದ ರಾಜ್ಯಗಳಿಗೆ ಈ ವಿಷಯಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ತೀರ್ಮಾನಗಳ ಜಾರಿಗೆ ಕಷ್ಟವಾಗಲಿದೆ ಎನ್ನಲಾಗುತ್ತಿದೆ.
🎥Visuals of the @NITIAayog Governing Council meeting underway pic.twitter.com/KihqOZ36ZP
— PIB India (@PIB_India) May 27, 2023
ಗೈರಾದ ಸಿಎಂಗಳು ಯಾರು? ಏಕೆ?
ದೆಹಲಿಯಲ್ಲಿ ಆಡಳಿತ ಸೇವೆಗಳ ಮೇಲಿನ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಭೆಗೆ ಹಾಜರಾಗಿಲ್ಲ. ಇನ್ನು, ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಕೂಡ ಗೈರಾಗಿದ್ದಾರೆ. ಕರ್ನಾಟಕದಲ್ಲಿ ಸಚಿವರ ಪ್ರಮಾಣವಚನ, ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ನೂತನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.
ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಬೇರೆ ಕಾರ್ಯಕ್ರಮದಿಂದಾಗಿ ಒಡಿಶಾ ಸಿಎಂ ನವೀನ್ ಪಾಟ್ನಾಯಕ್, ಕೇಂದ್ರದ ಮೇಲಿನ ಅಸಮಾಧಾನದಿಂದಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ಕೆ.ಚಂದ್ರಶೇಖರ ರಾವ್ ಹಾಗೂ ಯಾವುದೇ ಕಾರಣ ನೀಡದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.
ಇದನ್ನೂ ಓದಿ: NITI Aayog Meeting: ಕೇಂದ್ರಕ್ಕೆ ಬಾಯ್ಕಾಟ್ ಬಿಸಿ; ದೀದಿ ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್