ನವದೆಹಲಿ: ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆಂದು (spying for Israel) ಆರೋಪಿಸಿ, ಎಂಟು ಮಾಜಿ ಭಾರತೀಯ ನೌಕಾ ಪಡೆ ಅಧಿಕಾರಿಗಳಿಗೆ (ex-Indian Navy veterans) ಕತಾರ್‌ನಲ್ಲಿ (Qatar) ಗಲ್ಲು ಶಿಕ್ಷೆ ವಿಧಿಸಲಾಗಿದೆ(Death Sentence). ಈ ಎಂಟೂ ಮಂದಿ ಕತಾರಿ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಭಾರತದ ನೌಕಾ ಪಡೆಯಲ್ಲಿ ಯುದ್ಧ ಹಡುಗುಗಳ ಕಮಾಂಡರ್ ಆಗಿದ್ದರು(commanded Indian warships).
ಈಗ ಶಿಕ್ಷೆಗೆ ಗುರಿಯಾಗಿರುವ ಎಂಟೂ ಅಧಿಕಾರಿಗಳನ್ನು 2022ರ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರ ವಿರುದ್ಧ ಬೇಹುಗಾರಿಕೆ ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಆರೋಪ ಹೊರಿಸಲಾಗಿತ್ತು. ಕತಾರ್‌ನ ರಹಸ್ಯ ನೌಕಾ ಯೋಜನೆಗೆ ಸಂಬಂಧಿಸಿದಂತೆ ಬೇಹುಗಾರಿಕೆ ಮಾಡುತ್ತಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ.
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಾಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಗೋಪಕುಮಾರ್ ಶಿಕ್ಷೆಗೊಳಗಾದ ನೌಕಾ ಪಡೆಯ ಮಾಜಿ ಅಧಿಕಾರಿಗಳಾಗಿದ್ದಾರೆ. ಅವರು ಖಾಸಗಿ ಸಂಸ್ಥೆಯಾದ ದಾಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಇದು ಕತಾರ್‌ನ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ.
ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವ ಕುರಿತು ಆಘಾತ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಈ ಕುರಿತು ಕತಾರಿ ಅಧಿಕಾರಿಗಳ ಜತೆ ಮಾತನಾಡುವುದಾಗಿ ಹೇಳಿದೆ.
ಕತಾರ್ ನ್ಯಾಯಾಲಯದ ಆದೇಶವು ನಮಗೆ ಆಘಾತ ತಂದಿದೆ ಮತ್ತು ಆದೇಶದ ಪೂರ್ಣ ಮಾಹಿತಿಗಾಗಿ ನಾವು ಎದುರು ನೋಡುತ್ತಿದ್ದೇವೆ. ನಾವು ಶಿಕ್ಷೆಗೆ ಗುರಿಯಾದ ಅಧಿಕಾರಿಗಳ ಕುಟುಂಬದ ಸದಸ್ಯರು ಮತ್ತು ಕಾನೂನು ಪರಿಣಿತರ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕಾನೂನು ಆಯ್ಕೆಯಗಳನ್ನು ಶೋಧಿಸುತ್ತಿದ್ದೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಾವು ಈ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ. ಫಾಲೋಅಪ್ ಕೂಡ ಮಾಡುತ್ತಿದ್ದೇವೆ. ನಾವು ಎಲ್ಲಾ ಕಾನ್ಸುಲರ್ ಮತ್ತು ಕಾನೂನು ಸಹಾಯವನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ. ನಾವು ಈ ತೀರ್ಪು ಕುರಿತು ಕತಾರಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನೌಕಾಪಡೆ ಮಾಜಿ ಅಧಿಕಾರಿಗಳ ವಿರುದ್ಧದ ಆರೋಪವೇನು?
ಕಳೆದ ವರ್ಷ ದೋಹಾದಲ್ಲಿ ಬಂಧನಕ್ಕೊಳಗಾದ ವ್ಯಕ್ತಿಗಳು ಇಸ್ರೇಲ್‌ಗಾಗಿ ಕತಾರ್‌ನ ಸುಧಾರಿತ ಜಲಾಂತರ್ಗಾಮಿ ನೌಕೆಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಜಲಾಂತರ್ಗಾಮಿ ನೌಕೆಗಳು ತಮ್ಮ ರಹಸ್ಯ ಸಾಮರ್ಥ್ಯಗಳನ್ನು ಹೆಚ್ಚಿಸುವ ವಿಶೇಷ ವಸ್ತುಗಳಿಂದ ಲೇಪಿಸಲ್ಪಟ್ಟಿದ್ದವು. ಇದು ಪ್ರಪಂಚದ ಯಾವುದೇ ನೌಕಾಪಡೆಗೆ ಮೌಲ್ಯಯುತವಾಗಿರುವುದಾಗಿದೆ. ವರದಿಗಳು ಪ್ರಕಾರ, ಜಲಾಂತರ್ಗಾಮಿಗಳನ್ನು ಇಟಾಲಿಯನ್ ಹಡಗು ನಿರ್ಮಾಣ ಕಂಪನಿಯೊಂದಿಗೆ ಸೇರಿ ಕತಾರ್ ನಿರ್ಮಾಣ ಮಾಡುತ್ತಿತ್ತು.
ಈ ಸುದ್ದಿಯನ್ನೂ ಓದಿ: Terrorists Killed: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಇಬ್ಬರು ಉಗ್ರರ ಎನ್‌ಕೌಂಟರ್
ಶಿಕ್ಷೆಗೊಳಗಾಗಿರುವ ಪೈಕಿ ಕಮಾಂಡರ್ ಪೂರ್ಣೆಂದು ತಿವಾರಿಗೆ ಅವರಿಗೆ 2019ರಲ್ಲಿ ಸಾಗರೋತ್ತರ ಭಾರತೀಯರಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯ ಪ್ರವಾಸಿ ಭಾರತೀಯ ಸಮ್ಮಾನ್ ನೀಡಲಾಗಿತ್ತು. ವಿದೇಶದಲ್ಲಿ ಭಾರತದ ವರ್ಚಸ್ಸು ಹೆಚ್ಚಿಸುವುದಕ್ಕಾಗಿ ಈ ಪ್ರಶಸ್ತಿಯನ್ನು ಪೂರ್ಣೆಂದು ತಿವಾರಿಗೆ ಅವರಿಗೆ ನೀಡಲಾಗುತ್ತಿದೆ ಎಂದು ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೇಳಿತ್ತು.
ಕತಾರ್ ಎಮಿರಿ ನೌಕಾ ಪಡೆಗಳಿಗೆ ಸಾಮರ್ಥ್ಯ ವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, ಭಾರತ-ಕತಾರ್ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಈ ಪ್ರಶಸ್ತಿಯನ್ನು ನೀಡಲಾಗಿದೆ. ಎನ್‌ಆರ್‌ಐಗಳು / ಪಿಐಒಗಳಿಗೆ ಈ ಅತ್ಯುನ್ನತ ಗೌರವವನ್ನು ಪಡೆದ ಮೊದಲ ಭಾರತೀಯ ಸಶಸ್ತ್ರ ಪಡೆ ಸಿಬ್ಬಂದಿ ಎಂದು ರಾಯಭಾರ ಕಚೇರಿ ಹೇಳಿತ್ತು.