ಜೈಪುರ: ರಾಜಸ್ಥಾನದ ಸಾರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ ಭಾನುವಾರ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿ ಇದೀಗ ಬಹುತೇಕ ಅರಣ್ಯವನ್ನು ವ್ಯಾಪಿಸಿದೆ.
ಸಾರಿಸ್ಕಾ ರಾಷ್ಟ್ರೀಯ ಉದ್ಯಾನವನದಲ್ಲಿ ಹಬ್ಬಿರುವ ಬೆಂಕಿಯನ್ನು ನಂದಿಸಲು ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿ ನಂದಿಸುವ ಕಾರ್ಯಕ್ಕೆ ಭಾರತೀಯ ವಾಯುಪಡೆ ಕೂಡ ಕೈಜೋಡಿಸಿದ್ದ, ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ವಾಯುಸೇನೆಯ ಎರಡು ಹೆಲಿಕಾಪ್ಟರ್‌ಗಳ ಮೂಲಕ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಕಿ ನಂದಿಸುವ ಕಾರ್ಯದಲ್ಲಿ 200 ಸಿಬ್ಬಂದಿ ನಿರತರಾಗಿದ್ದು, ಗ್ರಾಮಸ್ಥರು ಕೂಡ ಅರಣ್ಯ ಸಿಬ್ಬಂದಿಗಳಿಗೆ ಸಹಾಯ ಮಾಡುತ್ತಿದ್ದಾರೆ.
ಸುಮಾರು 10 ಚದರ ಕಿ.ಮೀ ಇರುವ ಈ ಸಾರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ 27 ಹುಲಿ ಹಾಗೂ ಸಾವಿರಾರು ವನ್ಯಜೀವಿಗಳು ವಾಸಿಸುತ್ತಿವೆ. ಕಾಡ್ಗಿಚ್ಚಿನಿಂದ 20ಕ್ಕೂ ಹೆಚ್ಚು ಹುಲಿ ಹಾಗೂ ಹುಲಿ ಮರಿಗಳು ಅಪಾಯಕ್ಕೆ ಸಿಲುಕಿವೆ. ಆದರೆ, ಬೆಂಕಿ ಕಾಣಿಸಿಕೊಂಡಿರುವ ಸ್ಥಳ ಕಾಡುಪ್ರಾಣಿಗಳ ವಾಸ ಸ್ಥಾನದಿಂದ ದೂರ ಇರುವುದಾಗಿ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ‘ಬೆಂಕಿ ನಂದಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವಿರತವಾಗಿ ಶ್ರಮಿಸುತ್ತಿವೆ’ ಎಂದು ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದಲೇ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ಗಳ ಮೂಲಕ ಬೆಂಕಿ ನಂದಿಸಲು ಕ್ರಮ ಕೈಗೊಳ್ಳಲಾಗಿದೆ. ಗುರುವಾರದ ಹೊತ್ತಿಗೆ ಬೆಂಕಿ ತಹಬದಿಗೆ ಬರಬಹುದು ಎಂದು ಮುಖ್ಯ ಅರಣ್ಯ ಸಂರಕ್ಷಕ ಡಿ.ಎನ್.ಪಾಂಡೆ ತಿಳಿಸಿದ್ದಾರೆ.