Site icon Vistara News

9 Years of PM Modi: ಮೋದಿ ಸರ್ಕಾರಕ್ಕೆ ಇಂದು 9 ವರ್ಷದ ಸಂಭ್ರಮ; ಪ್ರಮುಖ ಸಾಧನೆ ಏನೇನು?

Narendra Modi World's Most Popular Leader

Narendra Modi Dominates List Of Most Popular World Leaders With 77% Approval Rating

ನವದೆಹಲಿ: ಅದು 2014ನೇ ಇಸವಿ. ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು, ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಅವರು ಮಾಡಿದ ಹೋರಾಟ, ನರೇಂದ್ರ ಮೋದಿ ಅವರ ಮೇಲೆ ಜನ ಇಟ್ಟ ಭರವಸೆಯ ಪ್ರತೀಕವಾಗಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ದೊರೆಯಿತು. ಐತಿಹಾಸಿಕ ಗೆಲುವು ಸಾಧಿಸಿದ ನರೇಂದ್ರ ಮೋದಿ ಪ್ರಧಾನಿಯಾದರು. ಹೀಗೆ, ಮೋದಿ ಅವರ ನೇತೃತ್ವದಲ್ಲಿ 2014ರ ಮೇ 30ರಂದು ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೆ 9 ವರ್ಷ (9 Years of PM Modi) ತುಂಬುತ್ತಿದೆ. ಇಂತಹ ಹೊತ್ತಿನಲ್ಲಿ, ನರೇಂದ್ರ ಮೋದಿ ಅವರು 9 ವರ್ಷದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರ ಯಾವವು? ಸರ್ಕಾರ ಮಾಡಿದ ಸಾಧನೆಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಅದರಲ್ಲೂ, ಮೊದಲನೇ ಅವಧಿಯ ಆಡಳಿತ ಮೆಚ್ಚಿ, ಎರಡನೇ ಅವಧಿಗೆ ಜನ ಅಧಿಕಾರ ನೀಡಿದ ಕಾರಣ, ಎರಡನೇ ಅವಧಿಯ ಸಾಧನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.

370ನೇ ವಿಧಿ ರದ್ದು

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿರುವುದು ನರೇಂದ್ರ ಮೋದಿ ಸರ್ಕಾರದ ದಿಟ್ಟ ತೀರ್ಮಾನಗಳಲ್ಲಿ ಒಂದಾಗಿದೆ. ಉಗ್ರರ ತಾಣವಾಗಿದ್ದ, ಪ್ರತ್ಯೇಕವಾದಿಗಳ ಗೂಡಾಗಿದ್ದ, ಕಲ್ಲು ತೂರಾಟಗಾರರ ಪ್ರಯೋಗ ತಾಣವಾಗಿದ್ದ ಕಾಶ್ಮೀರದಲ್ಲಿ ಈಗ ಜಿ-20 ಸಭೆ ನಡೆಯುವಂತಾಗಿದ್ದರೆ ಅದಕ್ಕೆ 370ನೇ ವಿಧಿ ರದ್ದುಗೊಳಿಸಿದ್ದೇ ಕಾರಣವಾಗಿದೆ. 2019ರ ಆಗಸ್ಟ್‌ 5ರಂದು 370ನೇ ವಿಧಿ ರದ್ದು ಬಳಿಕ ಉಗ್ರರ ಉಪಟಳ ನಿಲ್ಲದಿದ್ದರೂ ಪ್ರತ್ಯೇಕವಾದಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಕಾಶ್ಮೀರದಲ್ಲಿ ವಿದೇಶಿ ಗಣ್ಯರು ಬಂದು ಶಾಪಿಂಗ್‌ ಮಾಡುವಂತಾಗಿದೆ. ಆದರೂ, ಕೇಂದ್ರ ಸರ್ಕಾರವು ಕಾಶ್ಮೀರ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಹಿನ್ನಡೆ ಅನುಭವಿಸಿದ್ದು, ಅದರ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ.

ಕಾಶ್ಮೀರದಲ್ಲಿ ಜಿ 20 ಶೃಂಗಸಭೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೊನೆಯ ಹಂತಕ್ಕೆ ಬಂದಿದ್ದು, ಇದನ್ನು ಸುಗಮವಾಗಿ ಕೈಗೊಂಡ ಕೀರ್ತಿ, ಬಿಜೆಪಿ ನೀಡಿದ ಭರವಸೆಯನ್ನು ಈಡೇರಿಸಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ಪರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ದೇಶಾದ್ಯಂತ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಂಡಿದ್ದು, ಸುಗಮವಾಗಿ ರಾಮಮಂದಿರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿದ್ದು ಕೇಂದ್ರ ಸರ್ಕಾರದ ಸಾಧನೆಯಾಗಿದೆ. ಅಷ್ಟೇ ಅಲ್ಲ, 2024ರ ಜನವರಿಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಸರ್ಕಾರ ಸಿದ್ಧವಾಗಿದೆ. ಹಾಗೆಯೇ, ಸುಪ್ರೀಂ ಕೋರ್ಟ್‌ ಆದೇಶದಂತೆ ಮಸೀದಿ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ.

ಕೊರೊನಾ ಸಂದರ್ಭದಲ್ಲಿ ಉಚಿತವಾಗಿ ಆಹಾರ ಧಾನ್ಯ ವಿತರಣೆ

ಕೊರೊನಾ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾಗ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಮೂಲಕ (PMGKAY) ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಿದ್ದು ಕೂಡ ಕೇಂದ್ರದ ಸಾಧನೆಯಾಗಿದೆ. ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುವ ಮೂಲಕ ಜನರ ನೆರವಿಗೆ ಕೇಂದ್ರ ಸರ್ಕಾರ ನಿಂತಿದ್ದು ಸ್ಮರಣೀಯ.

ಎಲ್ಲರಿಗೂ ಲಸಿಕೆ ವಿತರಣೆ

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶೀಯವಾಗಿ ಕೊರೊನಾ ನಿರೋಧಕ ಲಸಿಕೆ ಉತ್ಪಾದನೆ ಜತೆಗೆ ದೇಶಾದ್ಯಂತ ಕೋಟ್ಯಂತರ ಜನರಿಗೆ ವಿತರಣೆ ಮಾಡಿದ್ದು, ಎರಡು ಲಾಕ್‌ಡೌನ್‌ ಮಾಡಿಯೂ ಆರ್ಥಿಕತೆ ದಿವಾಳಿಯಾಗದಂತೆ ನೋಡಿಕೊಂಡಿದ್ದು, ಆಮ್ಲಜನಕ ಕೊರತೆ, ವೈದ್ಯಕೀಯ ಮೂಲ ಸೌಕರ್ಯಗಳ ಕೊರತೆ ಮಧ್ಯೆಯೂ ಕೊರೊನಾ ನಿರ್ವಹಣೆ ಮಾಡಿದ್ದು ಮೋದಿ ಸರ್ಕಾರದ ಸಾಧನೆ ಎಂಬುದರಲ್ಲಿ ಎರಡು ಮಾತಿಲ್ಲ. ಕೊರೊನಾ ನಿರೋಧಕ ಲಸಿಕೆಯ 200 ಕೋಟಿಗೂ ಅಧಿಕ ಡೋಸ್‌ ವಿತರಣೆ ಮಾಡಿದ್ದು, ಬೇರೆ ರಾಷ್ಟ್ರಗಳಿಗೂ ಲಸಿಕೆ ರವಾನೆ ಮಾಡಿದ್ದು ಸಾಧನೆಯಾಗಿದೆ.

ಕೊರೊನಾ ನಿರೋಧಕ ಲಸಿಕೆ ಅಭಿಯಾನ

ರೈತರ ಖಾತೆಯಲ್ಲಿ ಕಾಂಚಾಣ ಝಣಝಣ

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ವರ್ಷದಲ್ಲಿ ತಲಾ 2 ಸಾವಿರ ರೂ. ನಂತೆ ಮೂರು ಬಾರಿ 6 ಸಾವಿರ ರೂ. ನೀಡುವ ಮೂಲಕ ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಉಳಿಸಿಕೊಂಡಿದೆ. ಇದರಿಂದ ದೇಶದ ಕೋಟ್ಯಂತರ ರೈತರ ಖಾತೆಗೆ ಹಣ ಜಮೆಯಾಗುತ್ತಿದ್ದು, ಯೋಜನೆ ಜಾರಿಯಲ್ಲಿ ಎಲ್ಲೂ ಲೋಪವಾಗದಂತೆ ಕೇಂದ್ರ ಸರ್ಕಾರ ನೋಡಿಕೊಂಡಿದೆ.

ವಿದೇಶಗಳಿಂದ ಭಾರತೀಯರ ರಕ್ಷಣೆ

ಮೋದಿ ಸರ್ಕಾರವು ಎರಡನೇ ಅವಧಿಯ ವೇಳೆ, ಬೇರೆ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ರಕ್ಷಿಸುವಲ್ಲಿ ಬೇರೆ ರಾಷ್ಟ್ರಗಳಿಗೂ ಮಾದರಿ ಎನಿಸಿದೆ. ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಉಪಟಳ ಆರಂಭವಾದಾಗ ಕೇಂದ್ರ ಸರ್ಕಾರವು 700 ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ. ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ ಆರಂಭಿಸಿದಾಗ 23 ಸಾವಿರ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬಂದಿದೆ. ಅಷ್ಟೇ ಏಕೆ, ಕೆಲ ದಿನಗಳ ಹಿಂದೆಯೇ ಸುಡಾನ್‌ನಲ್ಲಿ ಆಂತರಿಕ ಸಂಘರ್ಷ ಉಂಟಾದಾಗ, ‘ಆಪರೇಷನ್‌ ಕಾವೇರಿ’ ಮೂಲಕ ಕನ್ನಡಿಗರೂ ಸೇರಿ ನೂರಾರು ಭಾರತೀಯರನ್ನು ಸರ್ಕಾರ ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ.

ಡಿಜಿಟಲ್‌ ಇಂಡಿಯಾ ಮೇನಿಯಾ

ನರೇಂದ್ರ ಮೋದಿ ಅವರು ಕಂಡ ಡಿಜಿಟಲ್‌ ಇಂಡಿಯಾ ಕನಸು ಬಹುತೇಕ ನನಸಾಗಿದೆ. ಮೊದಲೆಲ್ಲ ಯಾರಿಗಾದರೂ ಹಣ ಕಳುಹಿಸಬೇಕು ಎಂದರೆ ನೆಟ್‌ ಬ್ಯಾಂಕಿಂಗ್‌ ಮೊರೆ ಹೋಗಬೇಕಿತ್ತು. ಇಲ್ಲವೇ, ಬ್ಯಾಂಕ್‌ನಲ್ಲಿ ಕ್ಯೂ ನಿಂತು ಎನ್‌ಇಎಫ್‌ಟಿ (NEFT) ಮಾಡಬೇಕಿತ್ತು. ಆದರೆ, ಡಿಜಿಟಲ್‌ ಇಂಡಿಯಾ ಅಭಿಯಾನವು ಯಶಸ್ವಿಯಾಗಿದ್ದು, ಈಗ ಯುಪಿಐ ಮೂಲಕ ಕ್ಷಣಮಾತ್ರದಲ್ಲಿ ಹಣ ಕಳುಹಿಸಬಹುದಾಗಿದೆ. ಡಿಜಿಟಲ್‌ ಆರ್ಥಿಕತೆ ಸೃಷ್ಟಿಯಾಗಿದೆ. ಗ್ರಾಮದ ಗೂಡಂಗಡಿಗಳಿಂದ ಹಿಡಿದು ನಗರಗಳಲ್ಲಿ ತರಕಾರಿ ಮಾರುವವರೂ ಈಗ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ಇಟ್ಟುಕೊಂಡಿದ್ದಾರೆ. ಸದ್ಯ, ಶೇ. 75ರಷ್ಟು ಚಿಲ್ಲರೆ ವ್ಯಾಪಾರವು ಯುಪಿಐ ಮೂಲಕವೇ ಆಗುತ್ತಿದೆ. ಕೋಟ್ಯಂತರ ಜನ, ಲಕ್ಷಾಂತರ ಕೋಟಿ ರೂಪಾಯಿಯನ್ನು ಯುಪಿಐ ಮೂಲಕವೇ ವರ್ಗಾವಣೆ ಮಾಡುತ್ತಿದ್ದಾರೆ. ಯುಪಿಐ ವ್ಯವಸ್ಥೆಯನ್ನು ಬೇರೆ ದೇಶಗಳೂ ಅಳವಡಿಸಿಕೊಂಡಿವೆ.

ಸ್ವಚ್ಛ ಭಾರತ, ಜಲಶಕ್ತಿ ಯೋಜನೆ

ಭಾರತದ ವಿಜ್ಞಾನಿಗಳು ಚಂದ್ರನ ಅಂಗಳಕ್ಕೆ ಕಾಲಿಡುವಷ್ಟು ಮುಂದುವರಿದಿದ್ದರೂ ದೇಶದ ಜನ ಎಲ್ಲೆಂದರಲ್ಲಿ ಕಸ ಬಿಸಾಡುವ ಪ್ರವೃತ್ತಿ ಇತ್ತು. ಆದರೆ, ಮೋದಿ ಅವರು ಪ್ರಧಾನಿಯಾದ ಬಳಿಕ ಸ್ವಚ್ಛ ಭಾರತ ಅಭಿಯಾನ ಕೈಗೊಂಡರು. ಅವರೇ ಕಸ ಗುಡಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ದೇಶಾದ್ಯಂತ ಜಾಗೃತಿ ಮೂಡಿಸಿದರು. ಹಾಗಂತ, ಈಗ ದೇಶಕ್ಕೆ ದೇಶವೇ ಸ್ವಚ್ಛವಾಗದಿದ್ದರೂ, ಬಸ್‌ ಟಿಕೆಟ್‌ಅನ್ನು, ಚಹಾ ಕುಡಿದ ಕಪ್ಪನ್ನು ರಸ್ತೆ ಮೇಲೆ ಎಸೆಯದೆ, ಡಸ್ಟ್‌ಬಿನ್‌ಗೆ ಹಾಕುವಷ್ಟು ಜಾಗೃತಿ ಮೂಡಿದೆ. ಸ್ವಚ್ಛ ಭಾರತ ಯೋಜನೆ ಅನ್ವಯ ದೇಶದ 3 ಹಳ್ಳಿಗಳನ್ನು ಬಯಲುಶೌಚ ಮುಕ್ತ ಹಳ್ಳಿಗಳು ಎಂದು ಘೋಷಿಸಲಾಗಿದೆ. 2.5 ಲಕ್ಷ ಹಳ್ಳಿಗಳಲ್ಲಿ ಹಸಿ ತ್ಯಾಜ್ಯ ನಿರ್ವಹಣೆಯಾಗುತ್ತಿದೆ. 2 ಲಕ್ಷ ಗ್ರಾಮಗಳಲ್ಲಿ ಒಣ ತ್ಯಾಜ್ಯ ನಿರ್ವಹಣೆಯಾಗುತ್ತಿದೆ. ಇನ್ನು ಜಲಶಕ್ತಿ ಯೋಜನೆ ಅಡಿಯಲ್ಲಿ ಜನರಿಗೆ ಗುಣಮಟ್ಟದ ನೀರು ಪೂರೈಕೆ ಮಾಡಲಾಗುತ್ತಿದೆ.

ಮೂಲ ಸೌಕರ್ಯ ಅಭಿವೃದ್ಧಿ

ಗ್ರಾಮಗಳಲ್ಲಿ ಮನೆ ಮನೆಗಳಲ್ಲಿ ಶೌಚಾಲಯ ನಿರ್ಮಾಣದಿಂದ ಹಿಡಿದು ಸಾಮಾನ್ಯ ಜನರೂ ವಿಮಾನದಲ್ಲಿ ಪ್ರಯಾಣಿಸುವ ಉಡಾನ್‌ ಯೋಜನೆತನಕ ಮೋದಿ ಆಡಳಿತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಿದೆ. ದೇಶಾದ್ಯಂತ 11.72 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. 3.5 ಕೋಟಿ ಮನೆ ನಿರ್ಮಾಣ, ಉಜ್ವಲ ಯೋಜನೆ ಅಡಿಯಲ್ಲಿ 9.6 ಕೋಟಿ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಉಡಾನ್‌ ಯೋಜನೆ ಅಡಿಯಲ್ಲಿ ದೇಶಾದ್ಯಂತ ಇದ್ದ 74 ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 141ಕ್ಕೆ ಏರಿಸಲಾಗಿದೆ. ಜನಧನ್‌ ಯೋಜನೆ ಮೂಲಕ 50 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ರೈಲು ನಿಲ್ದಾಣಗಳನ್ನು ಅತ್ಯಾಧುನೀಕರಣ ಮಾಡಲಾಗಿದೆ. ರೈಲುಗಳಲ್ಲಿ ಜೈವಿಕ ಶೌಚಾಲಯಗಳ ಅಳವಡಿಕೆ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ದೇಶದ ನರನಾಡಿಗಳಂತೆ ಕಾಣುತ್ತಿವೆ.

ಇದನ್ನೂ ಓದಿ: Narendra Modi: ಮೋದಿ ಸರ್ಕಾರಕ್ಕೆ 9 ವರ್ಷ; ಪ್ರಧಾನಿ ರ‍್ಯಾಲಿ ಸೇರಿ ದೇಶಾದ್ಯಂತ 1 ತಿಂಗಳು ನೂರಾರು ಕಾರ್ಯಕ್ರಮ

Exit mobile version