ಮುಂಬಯಿ: ಕೇಂದ್ರ ಸರ್ಕಾರ ಹಣದುಬ್ಬರ ಹೆಚ್ಚಳವಾಗಲು ಬಿಡುವುದಿದಲ್ಲ. ಈಗಾಗಲೇ ಬೆಲೆ ಏರಿಕೆ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ ಎಂದು ( 9 Years of PM Modi ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಬಯಿನಲ್ಲಿ ಹೇಳಿದ್ದಾರೆ. ತಳಮಟ್ಟದಲ್ಲಿ ಎಲ್ಲ ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಹಣದುಬ್ಬರ ಇಳಿಮುಖವಾಗುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತದ ಗ್ರಾಹಕ ದರ ಆಧರಿತ ಹಣದುಬ್ಬರ (consumer price inflation) ಕಳೆದ ಏಪ್ರಿಲ್‌ನಲ್ಲಿ 4.7%ಕ್ಕೆ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ಇದು 5.66% ಇತ್ತು. ಆಹಾರ ವಸ್ತುಗಳ ಬೆಲೆ ಇಳಿಕೆಯ ಪರಿಣಾಮ ಒಟ್ಟಾರೆ ರಿಟೇಲ್ ಹಣದುಬ್ಬರ ಇಳಿಕೆಗೆ ಸಹಕಾರಿಯಾಗಿದೆ.
9 ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ವಿವರಿಸಿದ ವಿತ್ತ ಸಚಿವೆ:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 9 ವರ್ಷದ ಸಾಧನೆಯನ್ನು ಮುಂಬಯಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಅವರು ಹೇಳಿದ್ದೇನು? ಇಲ್ಲಿದೆ ಮುಖ್ಯಾಂಶಗಳು
- ಕೇಂದ್ರ ಸರ್ಕಾರ ಕೋವಿಡ್-19 ಬಿಕ್ಕಟ್ಟಿನ ಸಂದರ್ಭ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಿದೆ. ದೇಶಾದ್ಯಂತ 220 ಕೋಟಿ ಕೋವಿಡ್-19 ಲಸಿಕೆಯನ್ನು ವಿತರಿಸಲಾಗಿದೆ.
- ಜಾಗತಿಕ ಮಟ್ಟದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮಿದೆ. ಬಡವರಿಗೆ ಆಹಾರ ಭದ್ರತೆ ನೀಡಲಾಗಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಬೇರೆ ಯಾವುದೇ ದೇಶ ಈ ಅವಧಿಯಲ್ಲಿ ಸಾಧಿಸದಷ್ಟು ಮುನ್ನಡೆ ಸಾಧಿಸಿದ್ದೇವೆ.
- 12 ಕೋಟಿ ಮನೆಗಳಿಗೆ ಕುಡಿಯು ನೀರು ಕಲ್ಪಿಸಲಾಗಿದೆ. 9.60 ಕೋಟಿ ಉಚಿತ ಎಲ್ಪಿಜಿ ಅನಿಲ ಸಂಪರ್ಕ ವಿತರಿಸಲಾಗಿದೆ. ಬಡವರಿಗೆ ಪ್ರತಿ ಸಿಲಿಂಡರ್ ಗ್ಯಾಸ್‌ಗೆ 200 ರೂ. ಸಬ್ಸಿಡಿ ನೀಡಲಾಗಿದೆ.
- ಬ್ರಿಟನ್ ಅನ್ನು ಹಿಂದಿಕ್ಕೆ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ.
- ಬಡವರಿಗೆ 3.50 ಕೋಟಿ ರೂ. ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
- ತೆರಿಗೆ ಮೌಲ್ಯ ಮಾಪನವನ್ನು ಫೇಸ್‌ಲೆಸ್ ಆಗಿಸಲಾಗಿದೆ.
- ಬಡವರಿಗೆ 5 ಲಕ್ಷ ಕೋಟಿ ರೂ. ಮೌಲ್ಯದ ವೈದ್ಯಕೀಯ ಸೌಲಭ್ಯವನ್ನು ವಿತರಿಸಲಾಗಿದೆ. ಜನ್ ಔಷಧ ಕೇಂದ್ರಗಳಲ್ಲಿ 1 ರೂ.ಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಗುತ್ತಿದೆ.
- ಅಂತಾರಾಷ್ಟ್ರೀಯ ರಸಗೊಬ್ಬರ ದರ ಏರಿಕೆಯಾಗಿದ್ದಲೂ, ಏರಿಕೆಯ ಇಡೀ ಮೊತ್ತವನ್ನು ಕೋವಿಡ್ ಸಂದರ್ಭ ಮತ್ತು ನಂತರ ಸರ್ಕಾರವೇ ಭರಿಸಿದೆ.
- ವಂದೇ ಭಾರತ್ ಎಕ್ಸ್‌ಪ್ರೆಸ್, ಮೆಟ್ರೊ ಸೇವೆ ವಿಸ್ತರಣೆಯಿಂದ ಸಾರ್ವಜನಿಕ ಸಾರಿಗೆ ವೆಚ್ಚ ಇಳಿಕೆಯಾಗುತ್ತಿದೆ. ಭಾರತದ 15 ನಗರಗಳಲ್ಲಿ ಈಗ ಮೆಟ್ರೊ ರೈಲು ವ್ಯವಸ್ಥೆ ಇದೆ.
- ದೇಶದಲ್ಲಿ 700 ಹೊಸ ವೈದ್ಯಕೀಯ ಕಾಲೇಜುಗಳು ನಿರ್ಮಾಣವಾಗಿದೆ.
- ಪಿಎಂ ಗತಿ ಶಕ್ತಿ ಯೋಜನೆಯಿಂದ ಮೂಲಸೌಕರ್ಯ ಯೋಜನೆಗಳು ತ್ವರಿತವಾಗಿ ಅನುಷ್ಠಾನವಾಗುತ್ತಿದೆ.
- ಡಿಬಿಟಿ ಮೂಲಕ ಸರ್ಕಾರಕ್ಕೆ ಯೋಜನೆಗಳ ದಕ್ಷತೆ ವೃದ್ಧಿಗೆ ಸಹಕಾರಿಯಾಗಿದೆ.
- ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭರದಿಂದ ಸಾಗುತ್ತಿದ್ದು, 2024ರ ಆದಿಯಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ.
- ಕೋವಿಡ್ ಬಿಕ್ಕಟ್ಟಿನ ಸಂದರ್ಭ 2.97 ಕೋಟಿ ಭಾರತೀಯರನ್ನು ನಾನಾ ದೇಶಗಳಿಂದ ತವರಿಗೆ ಸುರಕ್ಷಿತವಾಗಿ ಕರೆ ತರಲಾಯಿತು.
- ದೇಶದ ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
ಇದನ್ನೂ ಓದಿ : 9 Years of PM Modi: ಮೋದಿ ಸರ್ಕಾರದಿಂದ ಅಭಿವೃದ್ಧಿಯ ಸಾಕಾರ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ