ನವದೆಹಲಿ: ಈ ಬಾರಿಯ ಬೇಸಿಗೆ ಹಿಂದೆಂದಿಗಿಂತ ಹೆಚ್ಚು ಸುಡುತ್ತಿದೆ. ದೇಶದ ಎಲ್ಲ ಮೂಲೆಗಳಲ್ಲೂ ತಾಪಮಾನ ಹೆಚ್ಚೇ ವರದಿಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳೂ ನಡೆಯುತ್ತಿವೆ. ಅದೇ ರೀತಿ ಇದೀಗ ಅಧ್ಯಯನ ಒಂದರ ವರದಿ ಹೊರಬಿದ್ದಿದ್ದು, ಭಾರತದ ಶೇ.90ರಷ್ಟು ಭೂಪ್ರದೇಶವು ತಾಪಮಾನದ ಅಪಾಯದಲ್ಲಿದೆ ಎನ್ನುವ ವಿಚಾರ ಹೊರಬಿದ್ದಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಪಾಯ ಮಿತಿಮೀರುವ ಹಂತದಲ್ಲಿದೆ ಎಂದು ವರದಿ ಹೇಳಿದೆ(Heatwave Impact).
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನದ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಅಧ್ಯಯನದ ಪ್ರಕಾರ ತಾಪಮಾನ ಸೂಚ್ಯಂಕ(HI)ದಲ್ಲಿ ಭಾರತದ ಶೇ.90ಕ್ಕೂ ಅಧಿಕ ಪ್ರದೇಶದಲ್ಲಿ ʼಅತ್ಯಂತ ಎಚ್ಚರಿಕೆಯʼ ಅಥವಾ ʼಅಪಾಯʼದ ಶ್ರೇಣಿಯ ತಾಪಮಾನ ವರದಿಯಾಗಿದೆ. ಹಾಗೆಯೇ ಹವಾಮಾನ ದುರ್ಬಲತೆ ಸೂಚ್ಯಂಕ(CVI)ದಲ್ಲಿಯೂ ಕೂಡ ತಾಪಮಾನ ಹೆಚ್ಚಿರುವುದಾಗಿ ವರದಿಯಾಗಿದೆ. ಇದರಿಂದಾಗಿ ದೇಶದ ಮಂದಿ ತಾಪಮಾನ ಸಂಬಂಧಿತ ಸಮಸ್ಯೆಗಳಿಗೆ ತುತ್ತಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು(SDGs) ತಲುಪುವುದಕ್ಕೆ ಭಾರತವು ಹಲವು ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ಈ ಗರಿಷ್ಠ ತಾಪಮಾನವು ಅದಕ್ಕೆ ಅಡ್ಡಿಯಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Rising temperature : ಕಾದ ಕಾವಲಿಯಂತಾದ ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಗದಗ; ಇನ್ನೊಂದು ವಾರ ಏರುತ್ತಲೇ ಹೋಗಲಿದೆ ತಾಪಮಾನ
ಭೂ ವಿಜ್ಞಾನ ಇಲಾಖೆಯ ವರದಿಯ ಪ್ರಕಾರ ಕಳೆದ 50 ವರ್ಷಗಳಲ್ಲಿ ಬಿಸಿ ಗಾಳಿಯಿಂದಾಗಿ ದೇಶದಲ್ಲಿ 17,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 2021ರಲ್ಲಿ ಪ್ರಕಟವಾದ ಪತ್ರಿಕಾ ವರದಿಯೊಂದರಲ್ಲಿ 1971-2019ರವರೆಗೆ ದೇಶದಲ್ಲಿ 706 ಬಿಸಿಗಾಳಿ ದುರಂತಗಳು ಸಂಭವಿಸಿವೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ನವಿ ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಸರ್ಕಾರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹದಿಮೂರು ಜನರು ತಾಪಮಾನ ತಡೆಯಲಾರದೆ ಸಾವನ್ನಪ್ಪಿದ್ದಾರೆ.
ಭಾರತವು ಈ ಏರಿಕೆಯ ತಾಪಮಾನವನ್ನು ಹಿಡಿತದಲ್ಲಿಟ್ಟುಕೊಳ್ಳಲು ಕ್ರಮ ತೆಗೆದುಕೊಳ್ಳಬೇಕಿದೆ. ಒಂದು ವೇಳೆ ಶೀಘ್ರವೇ ಕ್ರಮ ತೆಗೆದುಕೊಳ್ಳಲಿ ವಿಫಲವಾದಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವುದು ನಿಧಾನವಾಗಲಿದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ವರದಿಯ ಕೊನೆಯಲ್ಲಿ ಎಚ್ಚರಿಸಿದ್ದಾರೆ.