ನವ ದೆಹಲಿ: ಕೋವಿಡ್-೧೯ ಲಸಿಕೆಯ ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಇರುವ ಭಾರತೀಯರಲ್ಲಿ ಒಟ್ಟು ೯೨% ಮಂದಿ ಇನ್ನೂ ತೆಗೆದುಕೊಂಡಿಲ್ಲ ಎಂದು ಅಂಕಿ ಅಂಶಗಳು ತಿಳಿಸಿವೆ. ಹೀಗಾಗಿ ಸರ್ಕಾರ ಜುಲೈ ೧೫ರಿಂದ ೧೮-೫೯ ವರ್ಷದವರಿಗೂ ೭೫ ದಿನಗಳ ಅವಧಿಗೆ ಉಚಿತವಾಗಿ ಕೋವಿಡ್-೧೯ ಲಸಿಕೆ ವಿತರಣೆಗೆ ಮುಂದಾಗಿರುವುದು ಮಹತ್ವ ಪಡೆದಿದೆ.
ಒಟ್ಟು ೫೯.೪ ಕೋಟಿ ಅರ್ಹ ಭಾರತೀಯರು ಕೋವಿಡ್-೧೯ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಇನ್ನೂ ಪಡೆದಿಲ್ಲ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಇದೀಗ ೧೮-೫೯ ವರ್ಷದವರಿಗೂ ೭೫ ದಿನಗಳ ಅವಧಿಗೆ ಉಚಿತವಾಗಿ ಬೂಸ್ಟರ್ ಡೋಸ್ ವಿತರಣೆ ಘೋಷಣೆಯಾಗಿರುವುದರಿಂದ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.
18-59 ವರ್ಷದವರಿಗೂ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್‌ನ್ನು ಜುಲೈ 15 ರಿಂದ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಇಂದು ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಚರಣೆ ಮಾಡುತ್ತಿರುವ ʼಆಜಾದಿ ಕಾ ಅಮೃತ್ ಮಹೋತ್ಸವ್ʼ ನಿಮಿತ್ತ, ಜುಲೈ 15ರಿಂದ 75 ದಿನಗಳವರೆಗೆ ಬೂಸ್ಟರ್ ಡೋಸ್ ಉಚಿತ ಲಸಿಕೆ ವಿತರಣೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ. ಅಂದಹಾಗೇ, ದೇಶದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ನ್ನು ಈಗಾಗಲೇ ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ಎರಡೂವರೆ ತಿಂಗಳು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಈ ಸೌಲಭ್ಯ ಸಿಗಲಿದೆ.
10 ಕೋಟಿ ಲಸಿಕೆ ಸ್ಟಾಕ್ : ಎಲ್ಲ ವಯಸ್ಕರಿಗೆ ಬೂಸ್ಟರ್ ಡೋಸ್ ಕೊಡಲು ಆರಂಭವಾದ ೯೫ ದಿನಗಳ ಬಳಿಕ ಸರ್ಕಾರ ಈ ೭೫ ದಿನಗಳ ಅಭಿಯಾನವನ್ನು ಕೈಗೊಂಡಿದೆ. ಪ್ರಸ್ತುತ ರಾಜ್ಯಗಳಲ್ಲಿ ೧೦ ಕೋಟಿ ಕೋವಿಡ್ ಲಸಿಕೆಗಳು ಸ್ಟಾಕ್‌ನಲ್ಲಿವೆ. ಈಗಿನ ಪ್ರಮಾಣದಲ್ಲಿ ಲಸಿಕೆ ವಿತರಣೆಯಾದರೆ ಈ ಸ್ಟಾಕ್ ಮುಗಿಯಲು ೨,೫೨೦ ದಿನಗಳು ಬೇಕು.
ಇದನ್ನೂ ಓದಿ:ನಿಮಗೆ 18 ವರ್ಷ ಆಗಿದೆಯೆ? ಜುಲೈ 15ರಿಂದ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಉಚಿತ