ಶಾಂಘೈ: ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವರ್ಚಸ್ಸು ಹೊಂದಿದ್ದು, ಅವರು ಯಾವ ದೇಶಕ್ಕೆ ಹೋದರೂ ಅಲ್ಲಿನ ನಾಯಕರು ಹಾಡಿ ಹೊಗಳುತ್ತಾರೆ. ಅಲ್ಲದೆ, ನರೇಂದ್ರ ಮೋದಿ (Narendra Modi) ಅವರು ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಾಯಕ ಎನಿಸಿದ್ದಾರೆ. ಇದರ ಬೆನ್ನಲ್ಲೇ, ಭಾರತಕ್ಕೆ ವೈರಿ ರಾಷ್ಟ್ರವೇ ಆಗಿರುವ ಚೀನಾದ ಪತ್ರಿಕೆಯೊಂದು ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದೆ. ಹೌದು, “ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಶಕ್ತಿಶಾಲಿಯಾಗಿದೆ” ಎಂದು ಚೀನಾದ (China) ಪ್ರಮುಖ ದಿನಪತ್ರಿಕೆಯಾದ ಗ್ಲೋಬಲ್ ಟೈಮ್ಸ್‌ನಲ್ಲಿ (Global Times) ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಶಾಂಘೈನ್ ಫುಡಾನ್ ವಿಶ್ವವಿದ್ಯಾಲಯದಲ್ಲಿರುವ ಸೆಂಟರ್ ಫಾರ್ ಸೌತ್ ಏಷ್ಯನ್ ಸ್ಟಡೀಸ್ ನಿರ್ದೇಶಕ ಝಾಂಗ್ ಜಿಯಾಡಾಂಗ್ ಅವರು ಗ್ಲೋಬಲ್ ಟೈಮ್ಸ್‌ನಲ್ಲಿ ಲೇಖನ ಬರೆದಿದ್ದಾರೆ. “ಭಾರತವು ಜಾಗತಿಕವಾಗಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಆಂತರಿಕ ಹಾಗೂ ಬಾಹ್ಯವಾಗಿ ವ್ಯೂಹಾತ್ಮಕ ತಂತ್ರಗಳು, ದೇಶದ ಏಳಿಗೆಯನ್ನು ಜಗತ್ತಿಗೆ ತಿಳಿಸುವ ಶೈಲಿಯನ್ನು ಕ್ಷಿಪ್ರವಾಗಿ ಬದಲಾಯಿಸಿಕೊಂಡಿದೆ. ಇದರಿಂದಾಗಿ ಜಾಗತಿಕವಾಗಿ ಭಾರತವು ಶಕ್ತಿಶಾಲಿ ರಾಷ್ಟ್ರ ಎಂಬ ಭಾವನೆ ಮೂಡಿದೆ. ಜಗತ್ತಿನ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾರತದ ಅಭಿಪ್ರಾಯ ಮುಖ್ಯವಾಗಿದೆ” ಎಂದು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
“ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಆಡಳಿತಾತ್ಮಕವಾಗಿ ಉತ್ತಮ ಸಾಧನೆ ಮಾಡಿದೆ. ಇದರಿಂದ ನಗರಗಳಲ್ಲಿ ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಹಾಗೆಯೇ, ಅಂತಾರಾಷ್ಟ್ರೀಯ ಸಂಬಂಧಗಳಿಗೂ ಭಾರತ ಆದ್ಯತೆ ನೀಡಿದೆ. ಚೀನಾ ಸೇರಿ ಹಲವು ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿದೆ. ಭಾರತವು ಪ್ರಮುಖ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿಯಾಗಿ ಭಾರತ ಬದಲಾಗಿದೆ. ಹಾಗಾಗಿಯೇ, ವಿಶ್ವಾದ್ಯಂತ ಈಗ ಭಾರತದ ಬಗೆಗಿನ ಅಭಿಪ್ರಾಯವೇ ಬದಲಾಗಿದೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: PM Narendra Modi: ಲಕ್ಷದ್ವೀಪ ಸಮುದ್ರದಲ್ಲಿ ಈಜಾಡಿದ ಮೋದಿ; ಇಲ್ಲಿದೆ ವಿಡಿಯೋ ನೋಡಿ
ವಿದೇಶಾಂಗ ನೀತಿಗೆ ಮೆಚ್ಚುಗೆ
“ಭಾರತದ ವಿದೇಶಾಂಗ ನೀತಿಯ ಕುರಿತು ಕೂಡ ಲೇಖನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. “ನರೇಂದ್ರ ಮೋದಿ ಅವರು ಪ್ರಧಾನಿಯಾದ ಭಾರತದ ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಹಾಗಾಗಿಯೇ ಭಾರತವು ಅಮೆರಿಕ, ಜಪಾನ್, ರಷ್ಯಾ ಸೇರಿ ಹಲವು ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಸಾಧ್ಯವಾಗಿದೆ. ಇದರಿಂದಾಗಿ ಭಾರತ ಉತ್ತಮ ಸಂಬಂಧ ಹೊಂದಲು ಸಾಧ್ಯವಾಗುವ ಜತೆಗೆ ವ್ಯಾಪಾರ, ಆ ರಾಷ್ಟ್ರಗಳ ಬೆಂಬಲ ಗಳಿಸಲು ಸಾಧ್ಯವಾಗಿದೆ” ಎಂದು ಉಲ್ಲೇಖಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ