ನವ ದೆಹಲಿ: ವಿಮಾನದಲ್ಲಿ ಕುಡುಕರ ಹಾವಳಿಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಲೇ ಇವೆ. ಕಳೆದ ನವೆಂಬರ್ 26ರಂದು ಅಮೆರಿಕದ ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ಇಂಡಿಯಾ ವಿಮಾನ (Air India)ದಲ್ಲಿ ಶಂಕರ್ ಮಿಶ್ರಾ ಎಂಬಾತ ಮದ್ಯಪಾನ ಮಾಡಿ, ತಮ್ಮ ಸಹ ಪ್ರಯಾಣಿಕರಾದ 70 ವರ್ಷದ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿದ್ದ. ಅದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಶಂಕರ್ ಮಿಶ್ರಾನನ್ನು ಪೊಲೀಸರು ಬಂಧಿಸಿ, ಬಳಿಕ ಜಾಮೀನು ಆಧಾರದಲ್ಲಿ ಬಿಡುಗಡೆಯಾಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ, ಇಂಥ ಇನ್ನೂ ಎರಡು-ಮೂರು ಘಟನೆಗಳು ನಡೆದಿದ್ದು ವರದಿಯಾಗಿತ್ತು. ಈಗ ಮತ್ತೊಂದು ಇಂಥದ್ದೇ ಪ್ರಕರಣ ವರದಿಯಾಗಿದೆ. ನ್ಯೂಯಾರ್ಕ್ ಮತ್ತು ದೆಹಲಿ ಮಧ್ಯೆ ಸಂಚರಿಸುವ ಅಮೆರಿಕನ್ ಏರ್ಲೈನ್ಸ್ನ ವಿಮಾನ(American Airlines flight)ದಲ್ಲಿ ಮಾರ್ಗಮಧ್ಯೆ ಭಾರತೀಯ ಪ್ರಯಾಣಿಕನೊಬ್ಬ, ತನ್ನ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ (Urinated on Passenger) ಮಾಡಿದ್ದಾನೆ. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ದೇಶದ ವಾಯುಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ತಿಳಿಸಿದೆ.
ಅಮೆರಿಕನ್ ಏರ್ಲೈನ್ಸ್ನ ಎಎ292 ವಿಮಾನ ಭಾನುವಾರ ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿತ್ತು. ಕಂಠಪೂರ್ತಿ ಮದ್ಯ ಸೇವಿಸಿದ್ದ ಈ ವ್ಯಕ್ತಿಯೊಬ್ಬ ಉಳಿದ ಪ್ರಯಾಣಿಕರು, ವಿಮಾನ ಸಿಬ್ಬಂದಿಯೊಂದಿಗೆ ಜಗಳ ತೆಗೆದಿದ್ದ. ಬಳಿಕ ಸಹಪ್ರಯಾಣಿಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಪ್ರಯಾಣಿಕ ಅಮೆರಿಕನ್ ಏರ್ಲೈನ್ಸ್ಗೆ ದೂರು ಕೊಟ್ಟಿದ್ದರು. ಬಳಿಕ ಏರ್ಲೈನ್ಸ್ ಸಂಸ್ಥೆ ಡಿಸಿಜಿಎಗೆ ವಿಷಯ ತಿಳಿಸಿ, ಅಂತಿಮವಾಗಿ ವಿಮಾನ ರಾತ್ರಿ 9ಗಂಟೆ ಹೊತ್ತಿಗೆ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಆ ಮೂತ್ರ ವಿಸರ್ಜನೆ ಮಾಡಿದ ಕುಡುಕ ಪ್ರಯಾಣಿಕನನ್ನು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF-ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Kolkata Airport | 90 ನಿಮಿಷ, 11 ವಿಮಾನ ಲ್ಯಾಂಡ್ ಮಾಡಲು ಪೈಲಟ್‌ಗಳು ಯತ್ನಿಸಿದರೂ ಆಗಲಿಲ್ಲವೇಕೆ?
ಡಿಸೆಂಬರ್ 6ರಂದೂ ಒಂದು ಇಂಥದ್ದೇ ಘಟನೆ ನಡೆದಿತ್ತು. ಪ್ಯಾರಿಸ್ನಿಂದ ದೆಹಲಿಗೆ ಬರುತ್ತಿದ್ದ ಏರ್ಇಂಡಿಯಾ ವಿಮಾನದಲ್ಲಿ ಕುಡುಕ ಪ್ರಯಾಣಿಕನೊಬ್ಬ ತನ್ನ ಸಹಪ್ರಯಾಣಿಕಳ ಸೀಟ್ ಮೇಲೆ ಮೂತ್ರವಿಸರ್ಜನೆ ಮಾಡಿದ್ದ. ಆಕೆ ತಮ್ಮ ಸೀಟ್ ಮೇಲೆ ತಾವು ಹೊದ್ದಿದ್ದ ಕಂಬಳಿಯನ್ನು ಇಟ್ಟು, ಅಲ್ಲಿಂದ ಎದ್ದು ಶೌಚಗೃಹಕ್ಕೆ ಹೋಗಿದ್ದಳು. ಆಕೆ ವಾಪಸ್ ಬರುವಷ್ಟರಲ್ಲಿ ಈ ಕುಡುಕ ಆಕೆ ಸೀಟ್ ಮೇಲೆ ಮೂತ್ರ ಮಾಡಿದ್ದ.