ನವದೆಹಲಿ: ಮಧುಮೇಹಿಗಳಿಗೆ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೇ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಪ್ರತಿದಿನ ಔಷಧಿ ತೆಗೆದುಕೊಳ್ಳುವ ಬದಲು, ವಾರಕ್ಕೊಮ್ಮೆ ತೆಗೆದುಕೊಂಡರೆ ಸಾಕು ಎನ್ನುವಂಥ ಇನ್ಸುಲಿನ್ ಔಷಧಿಯನ್ನು ೨೦೨೫ರ ಹೊತ್ತಿಗೆ ಬಿಡುಗಡೆ ಮಾಡುವುದಾಗಿ ಡೆನ್ಮಾರ್ಕ್ ಮೂಲದ ಔಷಧ ಸಂಸ್ಥೆ ನೋವೊ ನಾರ್ಡಿಸ್ಕ್ ಹೇಳಿದೆ(Insulin Injection).
ಭಾರತದಲ್ಲಿ ಅಂದಾಜು ೮ ಕೋಟಿ ಮಧುಮೇಹಿಗಳಿದ್ದು, ಅವರಲ್ಲಿ ೫೦ ಲಕ್ಷಕ್ಕೂ ಹೆಚ್ಚಿನವರು ಇನ್ಸುಲಿನ್ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾಗಿ ಭಾರತೀಯ ಮಾರುಕಟ್ಟೆಯನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು, ದೇಶದ ೨೭ ಕಡೆಗಳಲ್ಲಿ ಈ ಕುರಿತ ಪ್ರಯೋಗಗಳು ನಡೆಯುತ್ತಿವೆ. ೨೧೭ ರೋಗಿಗಳು ಈ ಅಧ್ಯಯನದ ಭಾಗವಾಗಿದ್ದಾರೆ ಎಂದು ಎಂದು ಸಂಸ್ಥೆಯ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜಾನ್ ಡಾಬರ್ ತಿಳಿಸಿದ್ದಾರೆ. ೨೦೨೫ರ ಮಧ್ಯಭಾಗದಲ್ಲಿ, ವಾರಕ್ಕೊಮ್ಮೆ ತೆಗೆದುಕೊಳ್ಳುವಂಥ ಇನ್ಸುಲಿನ್ ಔಷಧ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ನೋವೊ ನಾರ್ಡಿಸ್ಕ್ ಇಂಡಿಯಾದ ಮುಖ್ಯಸ್ಥ ವಿಕ್ರಾಂತ್ ಶ್ರೋತ್ರಿಯ ಹೇಳಿದ್ದಾರೆ. ಈ ಫಾರ್ಮಾಸ್ಯುಟಿಕಲ್ ಸಂಸ್ಥೆ ಇತ್ತೀಚೆಗಷ್ಟೇ ತನ್ನ ನೂರನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದೆ.
ಇನ್ನೂ ಒಂದೂವರೆ ವರ್ಷ ಕಾಯಬೇಕು
“ವಿಶ್ವದ ಇತರೆಡೆಗಳಲ್ಲಿ ಬಿಡುಗಡೆಯಾದ ಉತ್ಪನ್ನ ಭಾರತೀಯ ಮಾರುಕಟ್ಟೆಯನ್ನು ತಲುಪಲು ೯ರಿಂದ ೧೨ ತಿಂಗಳು ಬೇಕಾಗುತ್ತದೆ. ಈ ವ್ಯತ್ಯಾಸ ಉಂಟಾಗುವುದು ಭಾರತೀಯ ನೀತಿ-ನಿಯಮಗಳಿಂದಾಗಿ” ಎಂದ ಶ್ರೋತ್ರಿಯ, “ವಾರಕ್ಕೊಮ್ಮೆ ತೆಗೆದುಕೊಳ್ಳುವಂಥ ಬೆಳವಣಿಗೆಯ ಹಾರ್ಮೋನ್‌ಗಳನ್ನೂ ಮಾರುಕಟ್ಟೆಗೆ ತರುವ ಯೋಜನೆಯಿದೆ. ಈಗ ಪ್ರತಿದಿನ ತೆಗೆದುಕೊಳ್ಳುವಂಥ ಹಾರ್ಮೋನುಗಳು ಮಾತ್ರವೇ ಈಗ ಲಭ್ಯವಿದೆ”. ಇದು ಮಾರುಕಟ್ಟೆಗೆ ಬರಲು ಒಂದೂವರೆ ವರ್ಷಗಳ ಅಗತ್ಯವಿದೆ ಎಂದು ಅವರು ಹೇಳಿದರು.
ಬೆಲೆ ಹೆಚ್ಚಿಲ್ಲ: ಮಧುಮೇಹದ ಔಷಧಿಗಳ ಬೆಲೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, “ಈ ರೋಗವನ್ನು ನಿಯಂತ್ರಣದಲ್ಲಿ ಇಡದೇ ಇರುವುದಕ್ಕೆ ತೆರುವ ಬೆಲೆ, ಹತೋಟಿಯಲ್ಲಿ ಇಡುವುದಕ್ಕಿಂತ ೧೦ ಪಟ್ಟು ಹೆಚ್ಚು. ಒಂದು ಕಪ್ ಕಾಫಿಗಿಂತಲೂ ಕಡಿಮೆ ಬೆಲೆಯಲ್ಲಿ ಇಂದು ಇನ್ಸುಲಿನ್ ದೊರೆಯುತ್ತಿದೆ” ಎಂದು ಪ್ರತಿಪಾದಿಸಿದರು. ಮಾತ್ರವಲ್ಲ, ತಮ್ಮ ಸಂಸ್ಥೆಯ ಒಟ್ಟಾರೆ ಬೆಳವಣಿಗೆಯಲ್ಲಿ ಭಾರತೀಯ ಮಾರುಕಟ್ಟೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರಿಬ್ಬರೂ ಒತ್ತಿ ಹೇಳಿದರು.
ಭಾರತದಲ್ಲಿ ಇಂಥ ಯಾವುದೇ ಉತ್ಪನ್ನಗಳನ್ನು ಬಿಡುಗಡೆ ಮಾಡುವಾಗಲೂ ಬೆಲೆಯ ಬಗ್ಗೆ ಎಚ್ಚರಿಕೆಯನ್ನು ವಹಿಸಲೇಬೇಕು. ಆರ್ಥಿಕ ವಲಯದಲ್ಲಿರುವ ಎಲ್ಲಾ ದೇಶಗಳ ಬಗ್ಗೆಯೂ ತಮ್ಮ ಸಂಸ್ಥೆ ಈ ಜಾಗ್ರತೆಯನ್ನು ಸದಾ ವಹಿಸುತ್ತದೆ. “ಔಷಧಿಯ ಮೂಲಕ ಮಧುಮೇಹ ಹತೋಟಿಯಲ್ಲಿ ಇರಿಸಿಕೊಳ್ಳದಿದ್ದರೆ, ಆಸ್ಪತ್ರೆಗೆ ದಾಖಲಾಗುವುದು ಅಥವಾ ಕಿಡ್ನಿ, ಹೃದಯ ಸಮಸ್ಯೆಗಳಿಗೆ ತುತ್ತಾಗುವುದು ಇಲ್ಲವೇ ಕಾಲು ಕಳೆದುಕೊಳ್ಳುವಂಥ ಸಂಗತಿಗಳಿಗೆ ತುತ್ತಾಗುವುದು ಉಂಟಾಗಬಹುದು. ಆಗ ಉಂಟಾಗುವ ನೋವು, ವೆಚ್ಚಗಳನ್ನು ಭರಿಸುವುದಕ್ಕಿಂತ ಔಷಧಗಳಿಗೆ ಖರ್ಚು ಮಾಡುವುದು ಸೂಕ್ತವಲ್ಲವೇ?” ಎಂಬುದು ಅವರ ಅಭಿಮತ.
ಔಷಧ ಬಳಕೆ
೧೪೦ ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಸುಮಾರು ೮ ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಹಾಗಾಗಿ ಏಷ್ಯಾ-ಫೆಸಿಫಿಕ್ ಪ್ರಾಂತ್ಯದಲ್ಲಿ ಭಾರತ ನಮಗೆ ಎರಡನೇ ಅತಿದೊಡ್ಡ ಮಾರುಕಟ್ಟೆ. ಮೊದಲ ಸ್ಥಾನ ಆಸ್ಟ್ರೇಲಿಯಕ್ಕೆ ಸಲ್ಲುತ್ತದೆ. ಈ ರೋಗಿಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಉತ್ತಮ ಜೀವನವನ್ನು ಆದಷ್ಟೂ ಶೀಘ್ರ ಕಲ್ಪಿಸುವುದು- ಸಾಮಾಜಿಕ ಹೊಣೆಯ ದೃಷ್ಟಿಯಿಂದಾಗಲೀ ಅಥವಾ ಆರ್ಥಿಕ ಲಾಭದ ದೃಷ್ಟಿಯಿಂದಾಗಲಿ- ತಮ್ಮ ಸಂಸ್ಥೆಯ ಪಾಲಿಗೆ ಮಹತ್ವದ್ದು ಎಂಬುದು ಮುಖ್ಯಸ್ಥರ ಮಾತು.
ಇದನ್ನೂ ಓದಿ: Pre Diabetic | ಮಧುಮೇಹ ಪೂರ್ವ ಸ್ಥಿತಿಯಲ್ಲಿ ಆರೋಗ್ಯಪೂರ್ಣವಾಗಿ ಬದುಕುವುದು ಹೇಗೆ?
ಭಾರತೀತ ವೈದ್ಯರ ಶೈಕ್ಷಣಿಕ ಗುಣಮಟ್ಟ ಅತ್ಯ್ತುತ್ತಮವಾದದ್ದು. ಅವರ ವಿಶ್ವಾಸಾರ್ಹತೆಯೂ ಅದೇ ರೀತಿಯಲ್ಲಿದೆ. ಹಾಗಾಗಿ ಹೊಸ ಅಧ್ಯಯನಗಳನ್ನು ಭಾರತದಲ್ಲಿ ಮಾಡುವ ಬಗ್ಗೆ ಸಂಸ್ಥೆ ಆಸಕ್ತಿ ಹೊಂದಿದೆ. ಭಾರತದಲ್ಲಿ ಈಗಾಗಲೇ ೩೫ ಲಕ್ಷ ಮಂದಿ ನೋವೊ ನಾರ್ಡಿಸ್ಕ್ ಸಂಸ್ಥೆಯ ಔಷಧಿಗಳನ್ನು ಬಳಸುತ್ತಿದ್ದಾರೆ ಎಂದು ಅವರು ಸಂಸ್ಥೆಯ ಭಾರತೀಯ ನಂಟಿನ ಬಗ್ಗೆ ವಿವರಿಸಿದರು. ಮಾತ್ರವಲ್ಲ, ಭಾರತದಲ್ಲಿ ನಮ್ಮ ಸಂಸ್ಥೆಯಲ್ಲಿ ೩,೦೦೦ ಉದ್ಯೋಗಿಗಳಿದ್ದಾರೆ. ಆದರೆ ನಮ್ಮ ಸಂಸ್ಥೆಯ ಆದಾಯಕ್ಕೆ ಭಾರತೀಯ ಮಾರುಕಟ್ಟೆಯಿಂದ ಈಗ ಸಲ್ಲುತ್ತಿರುವುದು ಕೇವಲ ಶೇ. ೧ರಷ್ಟು ಎಂದು ತಿಳಿಸಿದರು.