ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟ ಸೋಮವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ (Women’s Reservation Bill) ಅಂಗೀಕರಿಸಿದೆ. ಮಹಿಳೆಯರಿಗೆ ಸಂಸತ್ತಿನಲ್ಲಿ ಶೇಕಡಾ 33ರಷ್ಟು ಮೀಸಲಾತಿ ನೀಡುವ ಈ ಮಸೂದೆ ಇದಾಗಿದೆ. ಅಂದರೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಲ್ಪಿಸಲಿದೆ. ಇದು ಭಾರತೀಯ ರಾಜಕೀಯದಲ್ಲಿ ದೀರ್ಘಕಾಲದಿಂದ ಬಿಸಿಬಿಸಿ ಚರ್ಚೆಗೆ ಕಾರಣವಾದ ವಿಷಯವೂ ಹೌದು.
ಲೋಕ ಸಭೆ ಚುನಾವಣೆ ಸಮೀಪವಿರುವ ಕಾರಣ ಮೋದಿ ಸರ್ಕಾರವು ಮಹಿಳೆಯರ ಮತದ ಮೇಳೆ ಕಣ್ಣಿಟ್ಟು ವಿಧೇಯಕ ಮಂಡಿಸುತ್ತಿದೆ ಎಂಬ ವಿಶ್ಲೇಷಣೆಯೂ ಇದೆ. ಆದಾಗ್ಯೂ ಮಸೂದೆಯು ದೀರ್ಘಕಾಲದಿಂದ ಆಗಾಗ ಮುನ್ನಲೆಗೆ ಬರುತ್ತಿತ್ತು ಪುರುಷ ಪ್ರಾಬಲ್ಯದ ಪಕ್ಷಗಳು ಮಾತ್ರ ಇದನ್ನು ನಿರಂತರ ವಿರೋಧಿಸಿದ್ದವು. ಹೀಗಾಗಿ ಎಂದೋ ಜಾರಿಯಾಗಬೇಕಾಗಿದ್ದ ಕಾನೂನು ಇಷ್ಟೊಂದು ವಿಳಂಬವಾಗಿದೆ. 2014 ಮತ್ತು 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವತಃ ಬಿಜೆಪಿಯೇ ಕಾಯಿದೆ ಮಾಡುವ ಭರವಸೆ ಕೊಟ್ಟಿತ್ತು. ಮೋದಿ ಎರಡೂ ಅವಧಿಯಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದರು. ಆದಾಗ್ಯೂ ಅಧಿಕಾರ ಹಿಡಿದು 10ನೇ ವರ್ಷ ಸಾಗುತ್ತಿರುವ ಅವಧಿಯಲ್ಲಿ ವಿಧೇಯಕ ಮಂಡಿಸಿದೆ. ಬಹುಮತ ಸರ್ಕಾರವಾಗಿರುವ ಕಾರಣ ಕಾಯಿದೆಯಾಗುವುದು ನಿಶ್ಚಿತ. ಇವೆಲ್ಲದರ ನಡುವೆಯೂ ಈ ಹಿಂದೆ ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್, ಕರ್ನಾಟಕದವರೇ ಆದ ಎಚ್.ಡಿ.ದೇವೇಗೌಡ ಅವರೂ ಮಹಿಳಾ ಪ್ರಾತಿನಿಧ್ಯ ನೀಡಲು ಈ ಕಾಯಿದೆಗೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಮೀಸಲಾತಿಯ ಬಗ್ಗೆ ಚರ್ಚೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದರೂ, 1987ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲ ಬಾರಿಗೆ ಇದನ್ನು ಪ್ರಸ್ತಾಪಿಸಿತ್ತು.
ಇದನ್ನೂ ಓದಿ : Women’s Reservation Bill: ಮಹಿಳಾ ಮೀಸಲು ವಿಧೇಯಕ ಮಂಡನೆ! ಹೊಸ ಸಂಸತ್ತಿನ ಮೊದಲ ಬಿಲ್ ಇದು
ಮಹಿಳಾ ಮೀಸಲಾತಿ ವಿಧೇಯಕದ ಸಾಗಿ ಹಾದಿಯ ಸಂಕ್ಷಿಪ್ತ ವಿವರ ಇಲ್ಲಿದೆ
- 1987ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ ನೇತೃತ್ವದಲ್ಲಿ 14 ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿಯು ಮಹಿಳಾ ಪ್ರಾತಿನಿಧ್ಯದ ಕುರಿತು ಅಧ್ಯಯನ ನಡೆಸಿತ್ತು. ಸಮಿತಿಯು ಮಾಡಿದ 353 ಶಿಫಾರಸುಗಳಲ್ಲಿ ಪ್ರಮುಖವಾದದ್ದು ಚುನಾವಣಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳ ಮೀಸಲಾತಿ ಕಲ್ಪಿಸುವುದು.
- 1992 ರಲ್ಲಿ, ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರವು 73 ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿತು. ಇದು ದೇಶಾದ್ಯಂತ ಅಧ್ಯಕ್ಷರ ಕಚೇರಿ ಸೇರಿದಂತೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 33.3 ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸಿತು.
- 1996 ರಲ್ಲಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸರ್ಕಾರವು ಮೊದಲ ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿತ್ತು. ಸಂವಿಧಾನ (81 ನೇ ತಿದ್ದುಪಡಿ) ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳಲ್ಲಿ ಮೀಸಲಾತಿ ಕಲ್ಪಿಸುವುದಾಗಿತ್ತು.
- ಮಹಿಳಾ ಮೀಸಲಾತಿ ವಿಧೇಯಕವು ಹಿಂದುಳಿದ ವರ್ಗಗಳ ಮಹಿಳೆಯರಿಗೂ ಸಮಾನ ಪ್ರಯೋಜನ ನೀಡುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅಧ್ಯಯನಕ್ಕಾಗಿ ಮಮತಾ ಬ್ಯಾನರ್ಜಿ, ಸುಷ್ಮಾ ಸ್ವರಾಜ್, ನಿತೀಶ್ ಕುಮಾರ್, ಶರದ್ ಪವಾರ್ ಮತ್ತು ಇತರ ಪಕ್ಷಗಳ ಹಲವಾರು ಹಿರಿಯ ನಾಯಕರನ್ನು ಒಳಗೊಂಡ 21 ಸದಸ್ಯರ ಸಂಸತ್ತಿನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ವರದಿಯ ನಂತರ ಅದೇ ವರ್ಷ ಮಸೂದೆಯನ್ನು ಮತ್ತೆ ಮಂಡಿಸಲಾಯಿತು. ಆದರೆ ಆ ಬಾರಿ ಅದಕ್ಕೆ ರಾಜಕೀಯ ಇಚ್ಛಾಶಕ್ತಿಯ ನೆರವು ದೊರೆಯಲಿಲ್ಲ.
- 1997ರಲ್ಲಿ ದೇವೇಗೌಡರಿಂದ ಅಧಿಕಾರ ವಹಿಸಿಕೊಂಡ ಐ.ಕೆ.ಗುಜ್ರಾಲ್ ಅವರ ಅಡಿಯಲ್ಲಿ, ಸರ್ಕಾರವು ಎರಡು ಸುತ್ತಿನ ಸರ್ವಪಕ್ಷ ಸಭೆಗಳನ್ನು ನಡೆಸಿತು. ಮೇ 1997 ರಲ್ಲಿ ಮಸೂದೆಯನ್ನು ಮತ್ತೆ ಕೈಗೆತ್ತಿಕೊಂಡಾಗ ಒಬಿಸಿ ನಾಯಕರಿಂದ ವಿರೋಧ ಎದುರಾಯಿತು. ಎಸ್ಸಿ-ಎಸ್ಟಿ ಮಹಿಳೆಯರಂತೆ ಒಬಿಸಿ ಮಹಿಳೆಯರಿಗೆ ಮೀಸಲಾತಿ ಇಲ್ಲದಿದ್ದರೆ, ವಿಧೇಯಕ ವ್ಯರ್ಥ ಎಂಬುದೇ ಅವರ ಆಕ್ಷೇಪವಾಗಿತ್ತು.
- 1997ರಲ್ಲಿ, ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ನ್ಯಾಯಮೂರ್ತಿ ಎಂ.ಸಿ.ಜೈನ್ ಆಯೋಗದ ವರದಿಯ ಬಗ್ಗೆ ಆಕ್ರೋಶ ವ್ಯಕ್ತಗೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಐಕೆ ಗುಜ್ರಾಲ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿತು. ಈ ವೇಳೆ ವಿಧೇಯಕ ರದ್ದಾಯಿತು.
- 1998 ರಲ್ಲಿ, ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುಮಿತ್ರಾ ಮಹಾಜನ್ ಅವರಂತಹ ನಾಯಕಿಯರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಮೀಸಲಾತಿ ಮಸೂದೆ ಅಂಗೀಕರಿಸಬೇಕೆಂದು ಒತ್ತಾಯಿಸಿದರು. ವಿಧೇಯಕ ಮಂಡಿಸಲು ಕಾನೂನು ಸಚಿವ ಎಂ.ತಂಬಿ ದುರೈ ಎದ್ದು ನಿಂತಾಗ ಮತ್ತು ಆರ್ಜೆಡಿ ಸಂಸದ ಸುರೇಂದ್ರ ಪ್ರಕಾಶ್ ಯಾದವ್ ವಿರೋಧ ವ್ಯಕ್ತಪಡಿಸಿದರು. ವಿಧೇಯಕದ ಕರಡು ಪ್ರತಿಯನ್ನು ತಂಬಿ ದುರೈ ಅವರ ಕೈಯಿಂದ ಕಿತ್ತು ಹರಿದು ಹಾಕಿದ್ದರು. ಅದಕ್ಕೆ ಲಾಲು ಪ್ರಸಾದ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಂತಹ ಒಬಿಸಿ ನಾಯಕರ ಬೆಂಬಲವಿತ್ತು. 1998ರ ಡಿಸೆಂಬರ್ನಲ್ಲಿ ಈ ವಿಧೇಯಕವನ್ನು ಮಂಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದ ಮಮತಾ ಬ್ಯಾನರ್ಜಿ ಸ್ಪೀಕರ್ ಮೇಜಿನ ಕಡೆಗೆ ಹೋಗುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ನಾಯಕ ದರೋಗಾ ಪ್ರಸಾದ್ ಸರೋಜ್ ತಡೆದಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಅವರ ಕಾಲರ್ಪಟ್ಟಿ ಹಿಡಿದು ಎಳೆದಿದ್ದು ದೊಡ್ಡ ಸುದ್ದಿಯಾಗಿತ್ತು.
- 1999ರಲ್ಲಿ ಜಯಲಲಿತಾ ಅವರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಲೋಕಸಭೆಯನ್ನು ವಿಸರ್ಜಿಸಲಾಯಿತು. ಈ ವೇಳೆ ಮಸೂದೆ ಮತ್ತೆ ರದ್ದಾಯಿತು. ಮತ್ತೆ ವಾಜಪೇಯಿ ನೇತೃತ್ವ ಕೇಂದ್ರ ಸರ್ಕಾರ ಆಯ್ಕೆಯಾಗಿ ಅದೇ ವರ್ಷದ ಚಳಿಗಾಲದ ಅಧಿವೇಶನದಲ್ಲಿ, ಕಾನೂನು ಸಚಿವ ಸಚಿವ ರಾಮ್ ಜೇಠ್ಮಲಾನಿ ಅವರ ಮೂಲಕ 85 ನೇ ತಿದ್ದುಪಡಿಗೆ ಅನುಮೋದನೆ ನೀಡಲಾಯಿತು. ಈ ವೇಳೆಯೂ ಆರ್ಜೆಡಿ ಹಾಗೂ ಎಸ್ಪಿ ನಾಯಕರು ಕಲಾಪದಲ್ಲಿ ದೊಂಬಿ ಎಬ್ಬಿಸಿದ್ದರು.
- ಆ ಬಳಿಕದ ವರ್ಷಗಳಲ್ಲಿ ಈ ವಿಷಯವು ಬಿಕ್ಕಟ್ಟಿನಲ್ಲೇ ಉಳಿಯಿತು. ಚುನಾವಣಾ ಆಯೋಗವು 2000ರಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನು ಕೇಳಿತು.
- 2003ರಲ್ಲಿ, ವಾಜಪೇಯಿ ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆಯಿತು. ಇದರಲ್ಲಿ ಪ್ರಧಾನಿ ವಾಜಪೇಯಿ ಅವರು ಮತ್ತೊಮ್ಮೆ ಮೀಸಲಾತಿಗೆ ಒಮ್ಮತ ಮತ್ತು ಬೆಂಬಲವನ್ನು ಗಳಿಸಲು ಪ್ರಯತ್ನಿಸಿದರು. ಅಲ್ಲೂ ಅವರು ವಿಫಲರಾದರು.
- ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರ ಪ್ರಯತ್ನಗಳನ್ನು ಮುಂದುವರಿಸಿದರು. 2005ರಲ್ಲಿ ಬೆಂಬಲ ಪಡೆಯುವ ಉದ್ದೇಶದಿಂದ ಸೋನಿಯಾ ಗಾಂಧಿ ಅವರು ಎಡ ಪಕ್ಷಗಳೊಂದಿಗೆ ಸಭೆ ನಡೆಸಿದ್ದರು. ಮಹಿಳಾ ಮೀಸಲಾತಿ ಮಸೂದೆಯನ್ನು ಮರಳಿ ತರುವುದು ಸೇರಿದಂತೆ ಮೂರು ವಿಷಯಗಳ ಬಗ್ಗೆ ಒಮ್ಮತವನ್ನು ಗಳಿಸಲು ಮನಮೋಹನ್ ಸಿಂಗ್ ಅವರು ಬಿಜೆಪಿಯ ನೆರವನ್ನೂ ಕೋರಿದ್ದರು.
- 2008 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಲ್ಲಾ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಕಾಯ್ದಿರಿಸಲು ಸಂವಿಧಾನ (108 ನೇ ತಿದ್ದುಪಡಿ) ಕಾಯಿದೆ 2008 ಅನ್ನು ರಾಜ್ಯಸಭೆಯಲ್ಲಿ ಮಂಡಿಸಿತ . 2010ರಲ್ಲಿ ಸಿಂಗ್ ಅವರ ಕ್ಯಾಬಿನೆಟ್ ವಿಧೇಯಕವನ್ನು ಅನುಮೋದಿಸಿತು. ರಾಜ್ಯಸಭೆಯಲ್ಲಿಯೂ ಅಂಗೀಕರಿಸಲಾಯಿತು. ಆದಾಗ್ಯೂ, ಇದು ಲೋಕಸಭೆಯಲ್ಲಿ ಮಂಡನೆಯಾಗಲೇ ಇಲ್ಲ. ಲೋಕ ಸಭೆಯ ವಿಸರ್ಜನೆ ಬಳಿಕ ವಿಧೇಯಕಕ್ಕೆ ಮತ್ತೆ ತೊಡಕುಂಟಾಯಿತು.
- 2013ರಲ್ಲಿ ಮನ್ಮೋಹನ್ ಸಿಂಗ್ ನೇತೃತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರ ಸ್ಥಿತಿಯ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚಿಸಿತು. ಚುನಾವಣಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಸ್ಥಾನಗಳನ್ನು ಕಾಯ್ದಿರಿಸಬೇಕು ಎಂದು ಶಿಫಾರಸು ಮಾಡಿತು.
- 2014ರಿಂದ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ (2014, 2019) ಮಹಿಳಾ ಮೀಸಲಾತಿಯ ಭವರಸೆ ನೀಡುತ್ತಲೇ ಬಂದಿದೆ. ಅಂತಿಮವಾಗಿ ಇದೀಗ ಮಂಡನೆ ಮಾಡಿದೆ.