ರಾಜಸ್ಥಾನದ ಕೋಟಾ ಜಿಲ್ಲೆ ಸ್ಪರ್ಧಾತ್ಮಕ ಪರೀಕ್ಷೆಗಳ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ. ಪ್ರತಿ ವರ್ಷ ಇಲ್ಲಿಯ ಕೋಚಿಂಗ್ ಸೆಂಟರ್‌ಗಳಲ್ಲಿ ದೇಶದ ಮೂಲೆಮೂಲೆಗಳಿಂದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ವರ್ಷವೊಂದರಲ್ಲಿ ಈ ಕೋಚಿಂಗ್ ವಹಿವಾಟಿನಿಂದಲೇ ಸುಮಾರು 5 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ ಎಂದರೆ ಇದರ ವ್ಯಾಪಕತೆ ಅರ್ಥ ಮಾಡಿಕೊಳ್ಳಬಹುದು. ದ್ವಿತೀಯ ಪಿಯುಸಿಯಿಂದ ಹಿಡಿದು, ನೀಟ್, ಜೆಇಇ, ಯುಪಿಎಸ್‌ಸಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಇಲ್ಲಿಗೆ ತಂಡೋಪತಂಡವಾಗಿ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇಲ್ಲಿಯ ಕೆಲವು ವಿದ್ಯಾರ್ಥಿಗಳು ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ ಪಡೆಯುತ್ತಿರುವುದೂ ನಿಜ. ಹಾಗಾಗಿ ಪೋಷಕರು ಭಾರಿ ಮಹತ್ವಾಕಾಂಕ್ಷೆಯನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಇದರ ದುರಂತ ಕತೆ ಏನೆಂದರೆ, ಇಲ್ಲಿಗೆ ಬರುವ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ಗಳ ಅಭ್ಯಾಸದ ಒತ್ತಡ ತಾಳಲಾರದೆ ಮತ್ತು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು. ಈ ವರ್ಷ ಇಲ್ಲಿಯವರೆಗೆ 22 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆತಂಕದ ವಿದ್ಯಮಾನವಾಗಿದೆ.
ಈ ಬೆಳವಣಿಗೆಯಿಂದ ರಾಜಸ್ಥಾನ ಸರ್ಕಾರಕ್ಕೆ ಕೂಡ ತಲೆನೋವಾಗಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ತಡೆಯಲು ವಿಶೇಷ ಸಮಿತಿಯೊಂದನ್ನು ಅಲ್ಲಿಯ ಸರ್ಕಾರ ರಚಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದಲ್ಲಿ ಸ್ಪೆಷಲ್ ಸ್ಟುಡೆಂಟ್ ಸೆಲ್ ಸ್ಥಾಪಿಸಲಾಗಿದೆ. ಕೋಟಾ ಜಿಲ್ಲಾಧಿಕಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್‌ಗೆ ಬರುವ ವಿದ್ಯಾರ್ಥಿಗಳು ವಾಸಿಸುವ ಹಾಸ್ಪೆಲ್‌ಗಳ ಫ್ಯಾನ್‌ಗೆ ಸ್ಪ್ರಿಂಗ್ ಮತ್ತು ಸೆನ್ಸರ್‌ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ಫ್ಯಾನ್‌ಗಳಿಗೆ ಸ್ಪ್ರಿಂಗ್ ಏಕೆಂದರೆ, ವಿದ್ಯಾರ್ಥಿಗಳು ಒಂದೊಮ್ಮೆ ನೇಣು ಹಾಕಿಕೊಳ್ಳಲು ಹೋದರೆ ಅವರ ಆತ್ಮಹತ್ಯೆ ಯತ್ನ ಸಫಲ ಆಗಬಾರದು ಎಂಬ ಉದ್ದೇಶ. ಫ್ಯಾನ್‌ಗೆ ನೇಣು ಹಾಕಿಕೊಳ್ಳಲು ಹೋದರೆ ಅದರಲ್ಲಿನ ಸೆನ್ಸರ್‌ನಿಂದಾಗಿ ಅಲಾರಾಂ ಸದ್ದು ಮಾಡುವಂತೆಯೂ ವ್ಯವ್ಯಸ್ಥೆ ಮಾಡಲಾಗಿದೆ. ಇನ್ನೊಂದೆಡೆ, ಹಾಸ್ಟೆಲ್‌ನ ಬಾಲ್ಕನಿ ಮತ್ತು ಕಟ್ಟಡದ ಆಯಕಟ್ಟಿನ ಜಾಗಗಳ ಕೆಳ ಭಾಗದಲ್ಲಿ ಬಲವಾದ ಬಲೆ ಅಳವಡಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಕಟ್ಟಡದ ಮೇಲಿಂದ ಜಿಗಿದರೂ ಅಪಾಯ ಆಗಬಾರದು ಎನ್ನುವುದು ಇದರ ಉದ್ದೇಶ.
ಯುವ ಜನರ ಆತ್ಮಹತ್ಯೆ ತಡೆಗೆ ಜಿಲ್ಲಾಡಳಿತವು ಇಂಥ ಇನೊವೇಟಿವ್ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ. ಆದರೆ ಇವೆಲ್ಲ ತಾತ್ಕಾಲಿಕ ಕ್ರಮಗಳಷ್ಟೆ. ಆತ್ಮಹತ್ಯೆ ಮಾಡಿಕೊಳ್ಳಲು ನೂರು ದಾರಿಗಳಿರುತ್ತವೆ. ಅಲ್ಲೆಲ್ಲ ಬಂದೋಬಸ್ತ್ ಮಾಡಲು ಸಾಧ್ಯವೆ? ತುರ್ತಾಗಿ ಮಾಡಬೇಕಿರುವುದು ವಿದ್ಯಾರ್ಥಿಗಳ ಒತ್ತಡದ ಮನಸ್ಸಿಗೆ ಸಾಂತ್ವನ ನೀಡಬೇಕಾದ ಕೆಲಸ.
ಕೋಟಾದ ಕೋಚಿಂಗ್ ಕ್ಲಾಸ್‌ಗಳ ಮಧ್ಯೆ ವಿಪರೀತ ಸ್ಪರ್ಧೆ ಇದೆ. ಹಾಗಾಗಿ ಹೆಚ್ಚಿನ ರ‍್ಯಾಂಕ್ ಗಿಟ್ಟಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಮೇಲೆ ವಿಪರೀತ ಒತ್ತಡ ಹೇರಲಾಗುತ್ತಿದೆ. ದೇಶದ ನಾನಾ ಭಾಗಗಳಿಂದ, ನಾನಾ ಭೌಗೋಳಿಕ ಸನ್ನಿವೇಶಗಳಿಂದ ಆಗಮಿಸುವ ಯುವ ಜನರು ರಾಜಸ್ಥಾನದ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಜವಾಗಿಯೇ ಪರದಾಡುತ್ತಾರೆ. ಆದರೆ ಯುವ ಮನಸ್ಸಿನ ಸೂಕ್ಷ್ಮತೆ ಅರಿಯದ ಕೋಚಿಂಗ್ ಸೆಂಟರ್‌ಗಳು ಪರೀಕ್ಷಾ ಸಿದ್ಧತೆಯ ವಿಪರೀತ ಒತ್ತಡ ಹಾಕುತ್ತವೆ. ಇನ್ನೊಂದೆಡೆ, ತಮ್ಮ ಮಕ್ಕಳ ಮೇಲೆ ಭಾರಿ ಮಹತ್ವಾಕಾಂಕ್ಷೆ ಹೊಂದಿರುವ ಪೋಷಕರು ಕೂಡ ಒತ್ತಡ ಹಾಕುತ್ತಾರೆ. ಹಾಗಾಗಿ ಸಹಜವಾಗಿಯೇ ವಿದ್ಯಾರ್ಥಿಗಳು ಅತಿಯಾದ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸನ್ನಿವೇಶ ತಪ್ಪಿದರೆ ಮಾತ್ರ ಆತ್ಮಹತ್ಯೆಗಳ ಸರಪಣಿ ತುಂಡಾಗಲು ಸಾಧ್ಯ.
ಇದನ್ನೂ ಓದಿ: Self Harming : ವಿದ್ಯಾರ್ಥಿ ಆತ್ಮಹತ್ಯೆ ಕೇಸ್; ಪ್ರತಿಷ್ಠಿತ ಕಾಲೇಜಿನ ಮೇಲೆ FIR
ಇನ್ನು, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ದೂರದ ರಾಜಸ್ಥಾನದ ಕೋಟಾಗೇ ಮಕ್ಕಳನ್ನು ಕಳುಹಿಸಿ ಕೊಡಬೇಕಿಲ್ಲ. ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳಲ್ಲೇ ಸಾಕಷ್ಟು ಉತ್ತಮ ಕೋಚಿಂಗ್ ಸೆಂಟರ್‌ಗಳಿವೆ. ಕೆಲವು ಕಡೆ ರಾಜ್ಯ ಸರ್ಕಾರವೇ ಉಚಿತವಾಗಿ ಇಂಥ ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿವೆ. ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗದೆಯೂ ಪ್ರತಿ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ರ‍್ಯಾಂಕ್ ಗಿಟ್ಟಿಸಿದ ವಿದ್ಯಾರ್ಥಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ. ಹಾಗಾಗಿ ಪೋಷಕರು, ಕೋಟಾ ಕೋಚಿಂಗ್ ಸೆಂಟರ್‌ಗಳ ಮೇನಿಯಾದಿಂದ ಹೊರಬಂದು ತಮ್ಮ ಮಕ್ಕಳ ಆಸಕ್ತಿಗೆ ಸ್ಪಂದಿಸಬೇಕಿದೆ. ಬಲವಂತವಾಗಿ ಇಂಥ ಕೋಚಿಂಗ್ ಸೆಂಟರ್‌ಗಳಿಗೆ ತಳ್ಳಿ ಮಕ್ಕಳನ್ನು ಮಾನಸಿಕವಾಗಿ ಘಾಸಿಗೊಳಿಸುವುದು ಸರಿಯಲ್ಲ. ಕೋಟಾದ ಸರಣಿ ಆತ್ಮಹತ್ಯೆಯಿಂದ ನಾವು ಪಾಠ ಕಲಿಯಬೇಕಿದೆ.