ಮುಂಬೈ: ಪತ್ರಕರ್ತ ಶಶಿಕಾಂತ್ ವಾರಿಶೆ ಎಂಬುವವರ ಮೇಲೆ ಎಸ್‌ಯುವಿ ಹರಿಸಿ ಕೊಲೆ ಮಾಡಿದ (Journalist Killed) ಘಟನೆಯು ರತ್ನಾಗಿರಿ ಜಿಲ್ಲೆಯ ರಾಜಾಪುರದಲ್ಲಿ ನಡೆದಿದೆ. ಶಶಿಕಾಂತ್ ಅವರಿಗೆ 48 ವರ್ಷ ವಯಸ್ಸಾಗಿತ್ತು. ಎಸ್‌ಯುವಿ ಹರಿಸಿದ ವ್ಯಕ್ತಿಯ ವಿರುದ್ಧ ಶಶಿಕಾಂತ್ ಅವರು ಲೇಖನವೊಂದನ್ನು ಬರೆದಿದ್ದರು. ಅದು ಸೋಮವಾರ ಪ್ರಕಟವಾಗಿತ್ತು. ಆರೋಪಿಯನ್ನು ತಕ್ಷಣವೇ ಪೊಲೀಸರು ಬಂದಿಸಿದ್ದಾರೆ. ಪತ್ರಕರ್ತ ಶಶಿಕಾಂತ್‌ಗೆ ತಾಯಿ, ಪತ್ನಿ ಹಾಗೂ 19 ವರ್ಷದ ಪುತ್ರನಿದ್ದಾನೆ.
ಶಶಿಕಾಂತ್ ಅವರು ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಾರ್ಸು ಎಂಬಲ್ಲಿ ಸ್ಥಾಪಿಸಲಾಗುತ್ತಿರುವ ರತ್ನಾಗಿರಿ ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿ(ಆರ್‌ಆರ್‌ಪಿಸಿಎಲ್) ಘಟಕಕ್ಕೆ ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಅವರು ಪತ್ರಿಕೆಯಲ್ಲಿ ವರದಿ ಮಾಡುತ್ತಿದ್ದರು.
ಕೊಲೆ ಆರೋಪಿಯನ್ನು ಪಂಢರಿನಾಥ ಅಂಬೇಕರ್ ಎಂದು ಗುರುತಿಸಲಾಗಿದೆ. ಪಿಎಂ, ಸಿಎಂ ಜತೆಗೆ ಫೋಟೋ ತೆಗೆಸಿಕೊಂಡ ಕ್ರಿಮಿನಲ್ ಎಂಬ ಶೀರ್ಷಿಕೆಯಡಿ ಅಂಬೇಕರ್ ವಿರುದ್ಧ ಮಹಾನಗರಿ ಟೈಮ್ಸ್ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಈ ಲೇಖನದಲ್ಲಿ ಅಂಬೇಕರ್ ಒಬ್ಬ ಕ್ರಿಮಿನಲ್ ಎಂದು ವಾದಿಸಲಾಗಿತ್ತು. ರಿಫೈನರ್ ಪರವಾಗಿ ಅಂಬೇಕರ್ ಇದ್ದಾರೆ ಮತ್ತು ರಿಫೈನರಿ ಯಾರು ವಿರೋಧಿಸುತ್ತಾರೆ ಅವರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿತ್ತು.
ಸೋಮವಾರ ಪತ್ರಕರ್ತ ಶಶಿಕಾಂತ ಅವರು ರಾಜಾಪುರ ಹೈವೇನ ಪೆಟ್ರೋಲ್ ಪಂಪ್ ಹತ್ತಿರ ನಿಂತಿದ್ದರು. ಆಗ ಅಂಬೇಕರ್ ತನ್ನ ಎಸ್‌ಯುವಿಯನ್ನು ಶಶಿಕಾಂತ್ ಮೇಲೆ ಹರಿಸಿದ್ದಾನೆ. ಅಲ್ಲದೇ, ಕೆಲವು ಮೀಟರ್‌ಗಳ ದೂರದವರೆಗೆ ಎಳೆದುಕೊಂಡು ಹೋಗಿದ್ದಾನೆ. ಅಷ್ಟೊತ್ತಿಗೆ ಸ್ಥಳೀಯರು ಜಮಾಯಿಸಿದ್ದಾರೆ. ಆಗ ಅಲ್ಲಿಂದ ಅಂಬೇಕರ್ ಕಾಲ್ಕಿತ್ತಿದ್ದಾನೆ. ಶಶಿಕಾಂತ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.