ಹೈದರಾಬಾದ್: ಎಲ್ಲೆಡೆ ಅದ್ಧೂರಿ ಗಣೇಶ ಚತುರ್ಥಿ ಆಚರಿಸಲಾಗಿದೆ. ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ನೆರವೇರಿಸಲಾಗಿದೆ. ಹಲವೆಡೆ ವಿಜೃಂಭಣೆಯ ಮೆರವಣಿಗೆ ಮೂಲಕ ಗಣೇಶ ಮೂರ್ತಿಯ ವಿಸರ್ಜನೆಯೂ ಆಗಿದೆ. ಈ ಮಧ್ಯೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಮಂಟಪದಲ್ಲಿ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟಿದ್ದು, ವಿಡಿಯೊ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದ ಧರ್ಮಾವರಂನಲ್ಲಿ ನಡೆದಿದೆ.
ಮಾರುತಿ ನಗರದಲ್ಲಿ ಸೆಪ್ಟಂಬರ್ 20ರಂದು ಈ ಘಟನೆ ನಡೆದಿದ್ದು, ಪ್ರಸಾದ್ ಎನ್ನುವ ಯುವಕ ಗಣೇಶನ ಮೂರ್ತಿ ಮುಂದೆ ನೃತ್ಯ ಮಾಡುತ್ತಿದ್ದಂತೆ ಕುಸಿದು ಬಿದ್ದಿದ್ದ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲೇ ಅವನು ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಸಾಲು ಸಾಲು ದುರಂತ
ಇದೇ ರೀತಿಯ ದುರಂತ ಒಡಿಶಾದಲ್ಲೂ ವರದಿಯಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ವಿದ್ಯುತ್ ಶಾಕ್‌ನಿಂದ ಇಬ್ಬರು ಅಸುನೀಗಿದ್ದಾರೆ. ಗಣಪತಿ ಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಅವರು ಭಾಗವಹಿಸಿದ್ದರು. ಕಟಕ್‌ನ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಲಾರಿಯಲ್ಲಿ ಗಣೇಶ ಮೂರ್ತಿಯನ್ನು ತರುವ ವೇಳೆ ವಿದ್ಯುತ್ ಆಘಾತದಿಂದ ಜೀವ ಕಳೆದುಕೊಂಡಿದ್ದಾನೆ. ಈ ವೇಳೆ ಇತರ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
11 ಕೆವಿ ವಿದ್ಯುತ್ ಪ್ರವಹಿಸುತ್ತಿರುವ ವೈರ್ ಸ್ಪರ್ಶಿಸಿ ನಾರಜ್ ಪ್ರದೇಶದ 3 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಮೂವರ ಪೈಕಿ ರಿಹಾನ್ ಭಗ್ವಾನ್ ಸಾವೆಲ್ ಎನ್ನುವ ವಿದ್ಯಾರ್ಥಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
గణేష్ మండపం దగ్గర డాన్స్ చేస్తూ గుండెపోటుతో మృతి
— Telugu Scribe (@TeluguScribe) September 21, 2023
శ్రీ సత్యసాయి జిల్లా – ధర్మవరంలో
ప్రసాద్ (26) అనే యువకుడు బుధవారం రాత్రి గణేష్ మండపం వద్ద డాన్స్ చేస్తూ గుండెపోటుతో ఒక్కసారిగా కుప్పకూలి మృతి చెందాడు. pic.twitter.com/RUqf1mzRMR
ಇದನ್ನೂ ಓದಿ: Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ವೈರಲ್ ಆದ ವಿಡಿಯೊದಲ್ಲೇನಿದೆ?
ಆಂಧ್ರ ಪ್ರದೇಶದ ಮಾರುತಿ ನಗರದ ಗಣೇಶ ಚಪ್ಪರದಲ್ಲಿ ಇಬ್ಬರು ಯುವಕರು ನೃತ್ಯ ಮಾಡುತ್ತಿದ್ದರು. ಆ ಪೈಕಿ ಒಬ್ಬಾತ ಕೈಯಲ್ಲಿ ಎಲೆಗಳ ಗೊಂಚಲನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದ. ಹಾಡಿನ ತಾಳಕ್ಕೆ ತಕ್ಕಂತೆ ಮೈ ಕುಣಿಸುತ್ತಿದ್ದ ಆತ ಚಪ್ಪರದ ಕಂಬದ ಬಳಿಗೆ ಬಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ. ಕೂಡಲೇ ಅಲ್ಲಿದ್ದವರು ಆತನಿಗೆ ಉಪಚಾರ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು 1 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಯುವ ಜನರಲ್ಲಿ ಹೆಚ್ಚುತ್ತಿದೆ ಹೃದಯಾಘಾತ
ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ದಿನೇ ದಿನೇ ಯುವ ಜನರು ಹೃದಯದ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ. ಇದಕ್ಕೆ ಸೂಕ್ತ ಕಾರಣ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಅದರಲ್ಲೂ ಆರೋಗ್ಯವಂತರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಹಲವರ ನಿದ್ದೆಗೆಡಿಸಿದೆ. ಸ್ಯಾಂಡಲ್‌ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟ ಚಿರಂಜೀವಿ ಸರ್ಜಾ, ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.