ದೆಹಲಿಯ ಶ್ರದ್ಧಾ ವಾಳ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ವಿಷಯಗಳು ಹೊರಬೀಳುತ್ತಿವೆ. ಡಿ.1ರಂದು ಆರೋಪಿ ಅಫ್ತಾಬ್ ಪೂನಾವಾಲಾ ಮಂಪರು ಪರೀಕ್ಷೆ ನಡೆದಿದೆ. ತಾನೇ ಶ್ರದ್ಧಾಳನ್ನು ಹತ್ಯೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ಹೇಗೆ ಕೊಂದೆ? ಯಾಕೆ ಕೊಂದೆ? ಆ ಸಮಯದಲ್ಲಿ ಅವಳೇನು ಉಡುಪು ಧರಿಸಿದ್ದಳು? ಶ್ರದ್ಧಾ ಮೊಬೈಲ್ ಏನು ಮಾಡಿದೆ? ಎಂಬಿತ್ಯಾದಿ ವಿಷಯಗಳನ್ನೂ ಅಫ್ತಾಬ್ ಮಂಪರು ಪರೀಕ್ಷೆಯಲ್ಲಿ ಹೇಳಿದ್ದಾನೆ ಎಂದು ಹೇಳಲಾಗಿದೆ.
ಅಫ್ತಾಬ್ ಅಮೀನ್ ಪೂನಾವಾಲಾನ ದೆಹಲಿ ಅಪಾರ್ಟ್ಮೆಂಟ್ನಲ್ಲಿದ್ದ ಹಲವು ಮಾರಕ ಅಸ್ತ್ರಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಆತ ಶ್ರದ್ಧಾ ಹತ್ಯೆ, ಆಕೆಯ ದೇಹವನ್ನು ಕತ್ತರಿಸಲು ಯಾವ ಆಯುಧ ಬಳಸಿದ್ದ ಎಂಬುದನ್ನು ಅಫ್ತಾಬ್ ವಿಚಾರಣೆ ವೇಳೆ ಸರಿಯಾಗಿ ಹೇಳಿರಲಿಲ್ಲ. ಆದರೆ ಮಂಪರು ಪರೀಕ್ಷೆ ವೇಳೆ ಅದನ್ನವನು ಹೇಳಿದ್ದಾನೆ ಎಂದು ವರದಿಯಾಗಿದೆ.
ಅಫ್ತಾಬ್ ಶ್ರದ್ಧಾಳನ್ನು ಮೊದಲು ಉಸಿರುಗಟ್ಟಿಸಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಲು ಚೈನೀಸ್ ಚಾಕು (ಚೀನಿ ಕ್ಲೀವರ್-ಮಾಂಸವನ್ನು ಕತ್ತರಿಸಲು ಬಳಸುವ ಚಾಕು)ವನ್ನು ಬಳಸಿದ್ದ ಎನ್ನಲಾಗಿದೆ. ಅವನು ಶ್ರದ್ಧಾಳ ದೇಹದಲ್ಲಿ ಮೊದಲು ಕತ್ತರಿಸಿದ್ದು ಆಕೆಯ ಕೈಯಗಳನ್ನು. ಬಳಿಕ ಒಂದೊಂದೇ ದೇಹವನ್ನು ಕತ್ತರಿಸಿ, ಚೀಲದಲ್ಲಿ ತುಂಬಿದ್ದ. ಶ್ರದ್ಧಾ ಹತ್ಯೆಗೆ ಬಳಸಿದ್ದ ಆಯುಧ ಸೇರಿ, ಇನ್ನುಳಿದ ಮಾರಕಾಸ್ತ್ರಗಳನ್ನು ತಾನು ಎಲ್ಲಿಟ್ಟಿದ್ದೇನೆ ಎಂಬುದನ್ನು ನ್ಯಾಕ್ರೋ ಟೆಸ್ಟ್ ವೇಳೆ ಅಫ್ತಾಬ್ ತಿಳಿಸಿದ್ದಾನೆ. ಅಲ್ಲೆಲ್ಲ ಈಗ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಆಯುಧಗಳನ್ನು ಅಫ್ತಾಬ್ ಖರೀದಿಸಿದ್ದು ಯಾವಾಗ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಶ್ರದ್ಧಾಳನ್ನು ಅಫ್ತಾಬ್ ಹತ್ಯೆ ಮಾಡಿದ್ದು ಇದೇ ವರ್ಷ ಮೇ 18ರಲ್ಲಿ. ಆದರೆ ಪ್ರಕರಣ ಬೆಳಕಿಗೆ ಬಂದಿದ್ದು ನವೆಂಬರ್ನಲ್ಲಿ. ಶ್ರದ್ಧಾ ಪಾಲಕರು ಕೊಟ್ಟ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೇ ಶಾಕ್ ಕಾದಿತ್ತು. ಹಂತಕ ಅಫ್ತಾಬ್ ಶ್ರದ್ಧಾಳ ದೇಹವನ್ನು 35 ಪೀಸ್ಗಳಾಗಿ ಕತ್ತರಿಸಿ, ಮೆಹ್ರೌಲಿ ಬಳಿಯ ಅರಣ್ಯದಲ್ಲಿ ಬಿಸಾಕಿದ್ದ. ಹೀಗೆ ಬಿಸಾಕುವ ಮುನ್ನ ಅದನ್ನು 300 ಲೀಟರ್ ಸಾಮರ್ಥ್ಯದ ಫ್ರಿಜ್ನಲ್ಲಿ ಇಟ್ಟಿದ್ದ. ಸದ್ಯ ಆ ಕೇಸ್ ತನಿಖೆ ಆಳವಾಗಿ ನಡೆಯುತ್ತಿದೆ.
ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್ ಹತ್ಯೆ ಕೇಸ್ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್