Site icon Vistara News

Aamir Khan: ಚೆನ್ನೈ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ ಗ್ರೇಟ್‌ ಎಸ್ಕೇಪ್‌

chennai

chennai

ಚೆನ್ನೈ: ಚೆನ್ನೈನ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಲಾಗಿದೆ. ಆಮೀರ್ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ (Vishnu Vishal), ಪ್ರವಾಹ ಪೀಡಿತ ಇತರರೊಂದಿಗೆ ರಕ್ಷಣಾ ದೋಣಿಯಲ್ಲಿ ಕುಳಿತಿರುವ ಫೋಟೊ ವೈರಲ್ ಆಗಿದೆ. ಫೋಟೋಗಳಲ್ಲಿ ಆಮೀರ್ ಮತ್ತು ವಿಷ್ಣು ವಿಶಾಲ್ ರಕ್ಷಣಾ ಅಧಿಕಾರಿಗಳಿಂದ ಸಹಾಯ ಪಡೆಯುತ್ತಿರುವುದನ್ನೂ ಕಾಣಬಹುದು. ಸುರಕ್ಷಿತ ಸ್ಥಳಕ್ಕೆ ತೆರಳಿದ ಬಳಿಕ ಅವರು ಫೋಟೊಗಳಿಗೆ ಪೋಸು ನೀಡಿದ್ದಾರೆ.

ಈ ಫೋಟೊ ವಿಷ್ಣು ವಿಶಾಲ್ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನೆರೆಗೆ ಸಿಲುಕಿದ ನಮ್ಮಂತಹ ನೂರಾರು ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ಇತರ ಇಲಾಖೆಗಳ ಸಿಬ್ಬಂದಿಗೆ ಧನ್ಯವಾದಗಳು. ಕರಪಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ 3 ದೋಣಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿದೆ. ಇಂತಹ ಸಂಧಿಗ್ಧ ಸಮಯದಲ್ಲಿ ತಮಿಳುನಾಡು ಸರ್ಕಾರದ ಉತ್ತಮ ಕೆಲಸ ಮಾಡುತ್ತಿದೆ. ಅವಿರತವಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ವಿದ್ಯುತ್ ಮತ್ತು ನೆಟ್‌ವರ್ಕ್‌ ಇಲ್ಲದೆ ಚೆನ್ನೈನ ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ವಿಷ್ಣು ವಿಶಾಲ್‌ ಈ ಹಿಂದೆ ಬಹಿರಂಗಪಡಿಸಿದ್ದರು. ತನ್ನ ಮನೆಯೊಳಗೆ ನೀರು ನುಗ್ಗಿದೆ ಎಂದು ತಿಳಿಸಿದ್ದರು. ಫೋಟೊಗಳನ್ನು ಹಂಚಿಕೊಂಡಿದ್ದ ಅವರು, “ನೀರು ನನ್ನ ಮನೆಯೊಳಗೆ ನುಗ್ಗುತ್ತಿದೆ. ಕರಪಕ್ಕಂನಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರುತ್ತಿದೆ. ನಾನು ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಇಲ್ಲ, ವೈಫೈ ಇಲ್ಲ, ಫೋನ್ ಸಿಗ್ನಲ್ ಇಲ್ಲ, ಏನೂ ಇಲ್ಲ. ಒಂದು ನಿರ್ದಿಷ್ಟ ಸ್ಥಳದಲ್ಲಿ ಟೆರೇಸ್‌ನಲ್ಲಿ ಮಾತ್ರ ನನಗೆ ಕೆಲವು ಸಿಗ್ನಲ್ ಸಿಗುತ್ತದೆʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಧಾರಾಕಾರ ಮಳೆ

ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕಡಲೂರು ಮತ್ತು ತಿರುವಳ್ಳೂರು ಜಿಲ್ಲೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಚೆನ್ನೈನ ಹೆಚ್ಚಿನ ಭಾಗಗಳು ಪ್ರಸ್ತುತ ನೀರಿನಲ್ಲಿ ಮುಳುಗಿವೆ. ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರವಾಹ ಕಂಡು ಬಂದಿದ್ದು, ರಕ್ಷಣಾ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರತರಾಗಿದ್ದಾರೆ. ನಿಂತ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ, ನೀರು ತುಂಬಿದ ರಸ್ತೆಗಳಲ್ಲಿ ಕಾರುಗಳು ತೇಲುತ್ತಿರುವ ದೃಶ್ಯ ವೈರಲ್‌ ಆಗಿತ್ತು.

ಇದನ್ನೂ ಓದಿ: Cyclone Michaung: ಮಿಚಾಂಗ್ ಚಂಡಮಾರುತದಿಂದ 8 ಸಾವು; ಶಾಲೆ, ಬ್ಯಾಂಕ್‌ ಕ್ಲೋಸ್‌

ನೆರವಿಗೆ ಬಂದ ಸಹೋದರರು

ಈ ಮಧ್ಯೆ ತಮಿಳು ಚಿತ್ರರಂಗದ ನಟರಾದ ಸೂರ್ಯ ಮತ್ತು ಕಾರ್ತಿ 10 ಲಕ್ಷ ರೂ.ಗಳ ಆರಂಭಿಕ ದೇಣಿಗೆಯನ್ನು ಘೋಷಿಸಿದ್ದಾರೆ. ಅಗತ್ಯವಿರುವ ಯಾವುದೇ ರೀತಿಯ ಸಹಾಯ ಒದಗಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ನಟರ ಅಭಿಮಾನಿ ಸಂಘಗಳ ಮೂಲಕ ನೆರವು ನೀಡಲಾಗುತ್ತದೆ.

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡು ಬೀಸುತ್ತಿರುವ ಮಿಚಾಂಗ್‌ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ 8 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತವಾಗಿದೆ. ಕಾರು- ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳು ಕುಸಿದಿವೆ. ಕೋಟಿಗಟ್ಟಲೆ ಆಸ್ತಿಗೆ ಹಾನಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version