Site icon Vistara News

AAP Funds: ನಿಯಮ ಉಲ್ಲಂಘಿಸಿ ಬೇರೆ ದೇಶಗಳಿಂದ ಆಪ್‌ 7 ಕೋಟಿ ರೂ. ದೇಣಿಗೆ ಸ್ವೀಕಾರ; ಇ.ಡಿ ಸ್ಫೋಟಕ ಮಾಹಿತಿ!

AAP Funds

AAP received Rs 7.08 crore foreign funds from 2014-2022, violated forex norms: ED

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿಗೆ (AAP) 2014ರಿಂದ 2022ರ ಅವಧಿಯಲ್ಲಿ ಬೇರೆ ಬೇರೆ ದೇಶಗಳಿಂದ 7.08 ಕೋಟಿ ರೂ. ದೇಣಿಗೆ (AAP Funds) ಹರಿದುಬಂದಿದೆ. ಆದರೆ, ದೇಣಿಗೆ ಸ್ವೀಕರಿಸುವಾಗ ಆಮ್‌ ಆದ್ಮಿ ಪಕ್ಷವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ನಿಯಮಗಳನ್ನು ಉಲ್ಲಂಘಿಸಿದೆ” ಎಂದು ಜಾರಿ ನಿರ್ದೇಶನಾಲಯವು (E.D) ಮಾಹಿತಿ ನೀಡಿದೆ. ಇದು ಈಗ ಪಕ್ಷ ಹಾಗೂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಹೊಸ ಸಂಕಷ್ಟ ತಂದಿದೆ.

ವಿದೇಶಿ ದೇಣಿಗೆ ನಿಯಮಗಳನ್ನು ಆಪ್‌ ಪಾಲಿಸದ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “2014ರಿಂದ 2022ರ ಅವಧಿಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಬೇರೆ ದೇಶಗಳಿಂದ 7.08 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಆದರೆ, ಇಷ್ಟು ಹಣ ಸ್ವೀಕರಿಸಲು ಆಪ್‌ ಎಫ್‌ಸಿಆರ್‌ಎ ನಿಯಮಗಳನ್ನು ಪಾಲಿಸಿಲ್ಲ. ಪಕ್ಷಕ್ಕೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಸೌದಿ ಅರೇಬಿಯಾ, ಕುವೈತ್‌, ಒಮಾನ್‌ ಸೇರಿ ಹಲವು ದೇಶಗಳಿಂದ ಆಪ್‌ ನಿಯಮ ಉಲ್ಲಂಘಿಸಿ ದೇಣಿಗೆ ಸ್ವೀಕರಿಸಿದೆ” ಎಂದು ತಿಳಿಸಿದ್ದಾರೆ.

2021ರಲ್ಲೇ ವಿಚಾರಣೆ ನಡೆದಿತ್ತು

ವಿದೇಶಗಳಿಂದ ದೇಣಿಗೆ ಪಡೆಯುವಾಗ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೇ 2021ರ ಸೆಪ್ಟೆಂಬರ್‌ನಲ್ಲಿ ಆಪ್‌ ನಾಯಕ ಪಂಕಜ್‌ ಕುಮಾರ್‌ ಅವರ ವಿಚಾರಣೆ ನಡೆಸಲಾಗಿತ್ತು. ಈಗ, ಆಪ್‌ಗೆ ದೇಣಿಗೆ ನೀಡಿದವರ ಕುರಿತು ತಪ್ಪು ಮಾಹಿತಿ ನೀಡಲಾಗಿದೆ. ದೇಣಿಗೆ ನೀಡಿದವರ ಮಾಹಿತಿಯನ್ನು ಮರೆಮಾಚಲಾಗಿದೆ ಎಂಬುದು ಸೇರಿ ಹಲವು ಆರೋಪಗಳನ್ನು ಇ.ಡಿ ಮಾಡಿದೆ. ಇದರ ಕುರಿತು ಕೇಂದ್ರ ಗೃಹ ಸಚಿವಾಲಯವು ಯಾವ ತೀರ್ಮಾನ ತೆಗೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.

ದೆಹಲಿ ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಜೈಲುಪಾಲಾಗಿದ್ದರು. ಅವರೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಜೂನ್‌ 2ರಂದು ಮತ್ತೆ ಜೈಲು ಸೇರಲಿದ್ದಾರೆ. ಆಪ್‌ನ ಹಲವು ಸಚಿವರು ಈಗಾಗಲೇ ಜೈಲಿನಲ್ಲಿದ್ದಾರೆ. ಇನ್ನು ರಾಜ್ಯಸಭೆಯ ಆಪ್‌ ಸದಸ್ಯೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ ಕಾರಣ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ಅವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಆಪ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಉದ್ಯಮಿಗಳಿಂದ 200 ಕೋಟಿ ರೂ. ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌, ಆಮ್‌ ಆದ್ಮಿ ಪಕ್ಷಕ್ಕೆ 60 ಕೋಟಿ ರೂ.ಗಳನ್ನು ದೇಣಿಗೆ ನೀಡಿರುವುದಾಗಿ 2022ರಲ್ಲಿ ಹೇಳಿದ್ದ. ಸುಕೇಶ್‌ ಚಂದ್ರಶೇಖರ್‌ ಬಿಜೆಪಿಯ ವಕ್ತಾರನಂತೆ ಮಾತನಾಡುತ್ತಿದ್ದು, ಜೈಲಿನಿಂದ ಬಿಡುಗಡೆಯಾದ ಬಳಿಕ ಆ ಪಕ್ಷ ಸೇರಬಹುದು ಎಂದು ಆಮ್‌ ಆದ್ಮಿ ಈ ಹಿಂದೆ ಟೀಕಿಸಿತ್ತು.

ಇದನ್ನೂ ಓದಿ: Arvind Kejriwal: “ತಾಕತ್‌ ಇದ್ರೆ ಅರೆಸ್ಟ್‌ ಮಾಡಿ…”; ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಓಪನ್‌ ಚಾಲೆಂಜ್‌

Exit mobile version