Site icon Vistara News

Delhi MCD Election| 134 ವಾರ್ಡ್​ಗಳನ್ನು ಗೆದ್ದ ಆಪ್​; ಪ್ರಧಾನಿ ನರೇಂದ್ರ ಮೋದಿಯವರಿಂದ ಆಶೀರ್ವಾದ ಕೋರಿದ ಕೇಜ್ರಿವಾಲ್​

AAP wins 134 Ward Kejriwal seeks PM Modi blessing

ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ, ಪಕ್ಷದ ನಾಯಕರು, ಪ್ರಮುಖರು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಪಕ್ಷದ ಪ್ರಧಾನ ಕಚೇರಿಯ ಹೊರಗೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್​ ‘ನಾವೆಲ್ಲರೂ ಒಟ್ಟಾಗಿ ಭ್ರಷ್ಟಾಚಾರ ತೊಡೆದು ಹಾಕಬೇಕು. ದೆಹಲಿಯನ್ನು ಸ್ವಚ್ಛಗೊಳಿಸಬೇಕು. ಯಾರೆಲ್ಲ ನಮಗೆ ಮತ ಹಾಕಿದ್ದಾರೋ, ಅವರಿಗೆ ಧನ್ಯವಾದಗಳು. ಹಾಗೇ, ಯಾರೆಲ್ಲ ನಮಗೆ ಮತ ಹಾಕಿಲ್ಲವೋ, ಅವರ ಸಮಸ್ಯೆಗಳನ್ನೇ ನಾವು ಮೊದಲು ಪರಿಹಾರ ಮಾಡುತ್ತೇವೆ’ ಎಂದು ಹೇಳಿದರು. ಹಾಗೇ, ‘ಹಾಗೇ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಮಗೆ, ದೆಹಲಿಗೆ ಅತ್ಯುತ್ತಮ ಆಡಳಿತ ನೀಡಲು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಬೇಕು’ ಎಂದೂ ಹೇಳಿದ್ದಾರೆ.

ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 250 ವಾರ್ಡ್​ಗಳಿದ್ದು, ಡಿಸೆಂಬರ್​ 4ರಂದು ಚುನಾವಣೆ ನಡೆದಿತ್ತು. ಇಂದು ಬೆಳಗ್ಗೆಯಿಂದ ಪ್ರಾರಂಭವಾದ ಮತಎಣಿಕೆ ಈಗ ಮುಕ್ತಾಯವಾಗಿದ್ದು, 134 ವಾರ್ಡ್​​ಗಳನ್ನು ಆಮ್​ ಆದ್ಮಿ ಪಕ್ಷ ಗೆದ್ದುಕೊಂಡಿದೆ. ಹಾಗೇ, ಬಿಜೆಪಿ 104 ವಾರ್ಡ್​ಗಳಲ್ಲಿ, ಕಾಂಗ್ರೆಸ್​ 9 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ 15 ವರ್ಷಗಳಿಂದಲೂ ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿಯನ್ನು ಬಿಜೆಪಿಯೇ ಹಿಡಿದಿತ್ತು. 2012ರಲ್ಲಿ ಆಮ್​ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂದ ಮೇಲೆ 2017ರಲ್ಲಿ ಮೊಟ್ಟಮೊದಲಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ ಸೋತಿತ್ತು. ಈ ಸಲ ಎರಡನೇ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು, ಭರ್ಜರಿಯಾಗಿಯೇ ಗೆಲುವು ಪಡೆದಿದೆ. ಆಪ್​ ಇದೇ ಮೊದಲ ಬಾರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಂತಾಗಿದೆ.

ಆಮ್​ ಆದ್ಮಿ ಪಕ್ಷ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿದೆ. ಪಂಜಾಬ್​ ಚುನಾವಣೆಯಲ್ಲಿ ಗೆದ್ದು, ಅಲ್ಲಿ ಸರ್ಕಾರ ರಚನೆ ಮಾಡಿದ ಬೆನ್ನಲ್ಲೇ, ಹಿಮಾಚಲ ಪ್ರದೇಶ, ಗುಜರಾತ್​ ವಿಧಾನಸಭೆ ಚುನಾವಣೆಗಳಲ್ಲೂ ಸ್ಪರ್ಧಿಸಿದೆ. ಇದೇ ಹೊತ್ತಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಜಯ ದೊರೆತಿದ್ದು, ಪಕ್ಷದ ಪಾಲಿಗೆ ಬಹುದೊಡ್ಡ ವರದಾನ ಆಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Delhi MCD Election| ಗೆಲುವಿನೆಡೆಗೆ ಹೆಜ್ಜೆ ಹಾಕುತ್ತಿರುವ ಆಮ್​ ಆದ್ಮಿ ಪಕ್ಷ; ಸದ್ಯ ಬಿಜೆಪಿಗೆ 60 ವಾರ್ಡ್​​ಗಳಲ್ಲಿ ಗೆಲುವು

Exit mobile version