ನವದೆಹಲಿ: ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಅಭಿಯಾನದ ಬಳಿಕ ಆಮ್ ಆದ್ಮಿ ಪಾರ್ಟಿ(AA), ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಪೋಸ್ಟರ್ ಕ್ಯಾಂಪೇನ್ (poster campaign) ಗುರುವಾರ ಆರಂಭಿಸಿದೆ. ಒಟ್ಟು 11 ಭಾಷೆಗಳಲ್ಲಿ ದೇಶಾದ್ಯಂತ ಮೋದಿ ವಿರೋಧಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದೆ. ಈ ಹಿಂದೆ, ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಪೋಸ್ಟರ್‌ಗಳನ್ನು ದಿಲ್ಲಿಯ ಬೀದಿಗಳಲ್ಲಿ ಅಂಟಿಸಲಾಗಿತ್ತು. ಈ ಸಂಬಂಧ ದಿಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ನೂರು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ(AAP Poster Campaign).
ಪೋಸ್ಟರ್ ವಾರ್ ಲಾಂಚ್ ಮಾಡಿದ ಆಪ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಟೀಕೆ ಮಾಡಿದೆ. ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಭಾರತದ ಪ್ರಧಾನಿ ಓದು ಬರಹ ಕಲಿತವರು ಆಗಬೇಕೆ ಬೇಡ್ವೇ ಎಂದು ಕೇಳಿದೆ. ಎಎಪಿ ಮಾರ್ಚ್ 30 ರಂದು ದೇಶಾದ್ಯಂತ ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಪ್ರದರ್ಶಿಸುತ್ತದೆ. ಪಕ್ಷದ ಎಲ್ಲಾ ರಾಜ್ಯ ಘಟಕಗಳಿಗೆ ಆಯಾ ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲು ಸೂಚಿಸಲಾಗಿದೆ. ಪೋಸ್ಟರ್‌ಗಳನ್ನು 11 ಭಾಷೆಗಳಲ್ಲಿ ಮುದ್ರಿಸಲಾಗಿದೆ ಎಂದು ದೆಹಲಿ ಎಎಪಿ ಮುಖ್ಯಸ್ಥ ಗೋಪಾಲ್ ರೈ ಪಿಟಿಐಗೆ ತಿಳಿಸಿದ್ದಾರೆ.
ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಆಪ್ ಮೋದಿ ವಿರೋಧಿ ಪೋಸ್ಟರ್ ಕ್ಯಾಂಪೇನ್ ಆರಂಭಿಸಲಿದೆ. ಆಪ್ 22 ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಪ್ರದರ್ಶಿಸಲಿದೆ. ಆಪ್ ಹಾಕಿರುವ ಪೋಸ್ಟರ್‌ಗಳು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಾದ ಪಂಜಾಬಿ, ಗುಜರಾತಿ, ಒಡಿಯಾ ಇತ್ಯಾದಿ ಭಾಷೆಗಳಲ್ಲಿ ಇರಲಿದೆ ಎಂದು ಗೋಪಾಲ್ ರೈ ಹೇಳಿದ್ದಾರೆ.
ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಂತ್ಯ ಮಾಡುತ್ತಿದ್ದಾರೆ. ಭಾರತವನ್ನು ಪ್ರತಿಪಕ್ಷ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಮೋದಿ ಹೊರಟಿದ್ದಾರೆ. ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆಪ್ ದೂರಿದೆ. ಮೋದಿ ಅವರು ಅಧಿಕಾರದಲ್ಲಿರುವತನಕ ಭಾರತವು ಬಿಕ್ಕಟ್ಟು ಎದುರಿಸಲಿದೆ ಎಂದು ಮತದಾರರಿಗೆ ಅನಿಸುತ್ತಿದೆ. ಮೋದಿ ಪ್ರಧಾನಿಯಾಗಿ ಇರುವ ತನಕ ಯುವಕರು, ರೈತರ ಮತ್ತು ಹಣದುಬ್ಬರ ಸಮಸ್ಯೆ ಬಗೆಹರಿಯುವುದಿಲ್ಲ. ಏಪ್ರಿಲ್ 10ರಿಂದ ಆಪ್ ದೇಶದ ಎಲ್ಲ ವಿವಿಗಳಲ್ಲಿ ಪೋಸ್ಟರ್ ಕ್ಯಾಂಪ್ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: AAP : ಆಪ್ ರಾಜ್ಯ ಘಟಕದ ಮುಖಂಡನ ಮೇಲೆ ಹಲ್ಲೆಗೆ ಯತ್ನ
ಕಳೆದ ವಾರ, ರಾಷ್ಟ್ರ ರಾಜಧಾನಿಯಾದ್ಯಂತ ಗೋಡೆಗಳು ಮತ್ತು ವಿದ್ಯುತ್ ಕಂಬಗಳ ಮೇಲೆ ಮೋದಿ ಹಟಾವೋ, ದೇಶ್ ಬಚಾವೋ (ಮೋದಿಯನ್ನು ಓಡಿಸಿ, ಭಾರತವನ್ನು ಉಳಿಸಿ) ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡವು, ಈ ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಪ್ರಧಾನಿ ಮೋದಿಯನ್ನು ಪದಚ್ಯುತಗೊಳಿಸುವಂತೆ ಕೋರಿ ಸಾವಿರಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯಲ್ಲಿ ಕಂಡುಬಂದ ನಂತರ ದೆಹಲಿ ಪೊಲೀಸರು 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಆಪ್‌ನ ಪ್ರಮುಖ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿವೆ. ಇವರಿಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ. ಏತನ್ಮಧ್ಯೆ, ದೇಶದ ಬಹಳಷ್ಟು ಪ್ರತಿಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿವೆ. ಪ್ರತಿಪಕ್ಷ ನಾಯಕರನ್ನು ಟಾರ್ಟೆಗ್ ಮಾಡಲಾಗುತ್ತಿದೆ. ಕೇಂದ್ರ ಸಂಸ್ಥೆಗಳಾದ ಸಿಬಿಐ, ಇಡಿಗಳನ್ನು ಬಳಸಿಕೊಂಡು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಮೋದಿ ವಿರುದ್ದ ದೇಶಾದ್ಯಂತ ತನ್ನ ಕ್ಯಾಂಪೇನ್ ಆರಂಭಿಸಿದೆ.