Site icon Vistara News

Abhijit Gangopadhyay: ದೀದಿ ವಿರುದ್ಧ ಮಾಜಿ ಜಡ್ಜ್‌ ಅವಹೇಳನಕಾರಿ ಹೇಳಿಕೆ; 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ತಡೆ

Abhijit Gangopadhyay

ನವದೆಹಲಿ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಹೈಕೋರ್ಟ್ ನ್ಯಾಯಾಧೀಶ ಮತ್ತು ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ(Abhijit Gangopadhyay) ಅವರಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಕ್ಕೆ ಚುನಾವಣಾ ಆಯೋಗ(Election Commission of India) ತಡೆಯೊಡ್ಡಿದೆ. ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಅಭಿಜಿತ್ ಗಂಗೋಪಾಧ್ಯಾಯ ಅವರು ಮೇ 15 ರಂದು ಹಲ್ದಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ತೃಣಮೂಲ ಕಾಂಗ್ರೆಸ್ ನೀಡಿದ್ದ ದೂರಿನ ಆಧಾರದ ಗಂಗೋಪಾಧ್ಯಾಯ ವಿರುದ್ಧ ಚುನಾವಣಾ ಆಯೋಗ ಈ ಹಿಂದೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಅಲ್ಲದೇ ಮೇ 20ರೊಳಗೆ ಪ್ರತಿಕ್ರಿಯಿಸುವಂತೆ ಸೂಚನೆ ನೀಡಿತ್ತು.

ಇಸಿ ತನ್ನ ನೋಟಿಸ್‌ನಲ್ಲಿ ಗಂಗೋಪಾಧ್ಯಾಯ ಅವರ ಹೇಳಿಕೆಯು ಅಸಮರ್ಪಕ, ನ್ಯಾಯಸಮ್ಮತವಲ್ಲ. ಘನತೆಯನ್ನು ಮೀರಿ, ಕೆಟ್ಟ ಅಭಿರುಚಿಯಿಂದ ಹೇಳಿಕೆ ನೀಡಲಾಗಿದೆ ಮತ್ತು ಮೇಲ್ನೋಟಕ್ಕೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಇಸಿ ಹೇಳಿತ್ತು.

ಗಂಗೋಪಾಧ್ಯಾಯ ಅವರು ತಮ್ಮ ತೀರ್ಪುಗಳಿಂದ ಜನಪ್ರಿಯರಾದವರು. ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮೇ 25 ರಂದು ಮತದಾನ ನಡೆಯಲಿರುವ ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗಂಗೋಪಾಧ್ಯಾಯ ಅವರನ್ನು ಕಣಕ್ಕಿಳಿಸಲಾಗಿದೆ.

ನಕಲಿ ವಿಡಿಯೋ ಎಂದ ಬಿಜೆಪಿ

ಇನ್ನು ಈ ತೃಣಮೂಲ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಬಿಜೆಪಿ ಇದೊಂದು ನಕಲಿ ವಿಡಿಯೋ ಎಂದು ಹೇಳಿದೆ. ಪಕ್ಷದ ಘನತೆಗೆ ಚ್ಯುತಿ ತರುವ ಉದ್ದೇಶದಿಂದ ಟಿಎಂಸಿ ಈ ರೀತಿ ನಕಲಿ ವಿಡಿಯೋ ಬಿಡುಗಡೆ ಮಾಡಿದೆ. ಇದರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ವಕ್ತಾರ ಸಾಮಿಕ್‌ ಭಟ್ಟಾಚಾರ್ಯ ಹೇಳಿದ್ದಾರೆ.

ಇದನ್ನೂ ಓದಿ:Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!!

Exit mobile version