ನವದೆಹಲಿ: ಮಾಹಿತಿ ತಂತ್ರಜ್ಞಾನ (Information Technology) ಸೇವಾಲಯ ಪ್ರಮುಖ ಕಂಪನಿಯಾಗಿರುವ ಅಕ್ಸೆಂಚರ್ (Accenture), ಕಾನೂನುವಾಗಿ ಕಡ್ಡಾಯವಾಗಿರುವ ಮತ್ತು ನಿರ್ಣಾಯಕ ಕೌಶಲ್ಯ ಕ್ಷೇತ್ರಗಳನ್ನು ಹೊರತುಪಡಿಸಿ, ಭಾರತ ಹಾಗೂ ಶ್ರೀಲಂಕಾದಲ್ಲಿರುವ ತನ್ನ ಉದ್ಯೋಗಿಗಳಿಗೆ ಸಂಬಳ ಏರಿಕೆ (No Pay Hikes) ಮಾಡುವುದಿಲ್ಲ ಎಂದು ಹೇಳಿದೆ. ಈಗಾಗಲೇ, ಕಂಪನಿಯು ಆರ್ಥಿಕ ಹಿಂಜರಿತ ನೆಪದಲ್ಲಿ ಸಾಕಷ್ಟು ಉದ್ಯೋಗಗಳನ್ನು ಕಡಿತ ಮಾಡಿದೆ.
ಕಂಪನಿಯ ಭಾರತದ ವ್ಯವಸ್ಥಾಕ ನಿರ್ದೇಶಕರಾಗಿರುವ ಅಜಯ್ ವಿಜ್ ಅವರು ತಮ್ಮ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ ಈ ಮಾಹಿತಿ ನೀಡಿದ್ದು, ಕೆಲವು ವಿಭಾಗಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಉದ್ಯೋಗಿಗಳಿಗೆ ಈ ವರ್ಷ ಸಂಬಳದಲ್ಲಿ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಕೌಶಲ್ಯ ಮತ್ತು ಸ್ಥಳದ ಆಧಾರದ ಮೇಲೆ ಮಾರುಕಟ್ಟೆ ಸಂಬಂಧಿತ ವೇತನವನ್ನು ಒದಗಿಸುವುದು ಕಂಪನಿಯ ತತ್ವವಾಗಿದೆ ಮತ್ತು ಅಕ್ಸೆಂಚರ್‌ಗೆ ಕೈಗೆಟುಕುವಂತಿರಬೇಕು. ನಮ್ಮ ಸೇವೆಗಳ ಸ್ಪರ್ಧಾತ್ಮಕ ಬೆಲೆ ಸೇರಿದಂತೆ ನಮ್ಮ ವ್ಯಾಪಾರದ ಆರೋಗ್ಯಕ್ಕೆ ನಮ್ಮ ವೇತನದಾರರನ್ನು ಮಾರುಕಟ್ಟೆಯೊಂದಿಗೆ ಜೋಡಿಸುವುದು ಅತ್ಯಗತ್ಯವಾಗಿದೆ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Accenture : ಐಟಿ ದಿಗ್ಗಜ ಅಕ್ಸೆಂಚರ್ ಕಂಪನಿಯಲ್ಲಿ ಟೆಕ್ಕಿಗಳಿಗೆ ಆಘಾತ, 19,000 ಉದ್ಯೋಗ ಕಡಿತ
ವೆಬ್‌ಸೈಟ್‌ನ ಪ್ರಕಾರ ಅಕ್ಸೆಂಚರ್‌ನಲ್ಲಿ 7,33,000 ಜನರಿದ್ದಾರೆ. ಕಂಪನಿಯ 3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಭಾರತದಿಂದ ಹೊರಗಿದ್ದಾರೆ. ಮಾರ್ಚ್ 2023ರಲ್ಲಿ ಕಂಪನಿಯು 19,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ವೇತನ ಏರಿಕೆ ಮಾಡುದಿರುವುದಕ್ಕೆ ನಿರ್ದಿಷ್ಟ ಕಾರಣವನ್ನು ನೀಡಿಲ್ಲವಾದರೂ, ಬಹುಶಃ ಎದುರಾಗಲಿರುವ ಆರ್ಥಿಕ ಹಿಂಜರಿತವೇ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಆರ್ಥಿಕ ಹಿಂಜರಿತ ಪರಿಣಾಮ ಪ್ರಸಕ್ತ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕಲ್ಲಿ ಫೇಸ್ ಬುಕ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಬಹಳಷ್ಟು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಈ ಮಧ್ಯೆ, ಅಕ್ಸೆಂಚರ್ ಕೂಡ ವೇತನವನ್ನು ಹೆಚ್ಚಿಸುವುದರ ಮೂಲಕ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.