Site icon Vistara News

Innocent Dies: ಮಲಯಾಳಂ ನಟ ಇನೋಸೆಂಟ್‌ ಇನ್ನಿಲ್ಲ, ಕೋವಿಡ್‌ಗೆ ಬಲಿ

Innocent Dies

ಕೊಚ್ಚಿ: ಮಲಯಾಳಂನ ಹಿರಿಯ ನಟ ಮತ್ತು ಮಾಜಿ ಸಂಸದ ಇನೋಸೆಂಟ್ ಭಾನುವಾರ ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಲೇಕ್‌ಶೋರ್ ಆಸ್ಪತ್ರೆಯ ಅಧಿಕಾರಿಗಳು ಹೊರಡಿಸಿದ ವೈದ್ಯಕೀಯ ಬುಲೆಟಿನ್‌ನಲ್ಲಿ, “ಇನೋಸೆಂಟ್‌ ಅವರು ಮಾರ್ಚ್ 3, 2023ರಿಂದ ನಮ್ಮ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಇದ್ದರು. ಕೋವಿಡ್ ಸಂಬಂಧಿತ ಉಸಿರಾಟದ ಸಮಸ್ಯೆಗಳು, ಬಹು ಅಂಗಾಂಗ ವೈಫಲ್ಯ ಮತ್ತು ಹೃದಯ ಸ್ತಂಭನ ಅವರ ಸಾವಿಗೆ ಕಾರಣವಾಗಿದೆ” ಎಂದು ತಿಳಿಸಲಾಗಿದೆ.

ಇನೋಸೆಂಟ್‌ ಅವರು ಈ ಮೊದಲು ಕ್ಯಾನ್ಸರ್‌ನಿಂದ ಪೀಡಿತರಾಗಿ ಬದುಕುಳಿದಿದ್ದರು. ಅವರನ್ನು ಮಾರ್ಚ್ 3ರಂದು ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಉಸಿರಾಟದ ತೊಂದರೆ ಮತ್ತು ಅಸ್ವಸ್ಥತೆಯ ಹಿನ್ನೆಲೆಯಲ್ಲಿ ದಾಖಲಿಸಲಾಗಿತ್ತು. 75 ವರ್ಷ ವಯಸ್ಸಿನ ಅವರು ಇತರ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

1948ರಲ್ಲಿ ಜನಿಸಿದ ಇನೋಸೆಂಟ್‌ ಅವರು 1972 ರಲ್ಲಿ ನೃತ್ಯಶಾಲಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಐದು ದಶಕಗಳ ವೃತ್ತಿಜೀವನದಲ್ಲಿ ಅವರು ಅಕ್ಕರೆ ನಿನ್ನೋರು ಮಾರನ್‌, ಗಾಂಧಿನಗರ 2 ಸ್ಟ್ರೀಟ್‌, ಉನ್ನಿಕಲೆ ಒರು ಕಥಾ ಪಾರಯುಮ್, ನಾಡೋಡಿಕ್ಕಟ್ಟು, ಮುಕುಂದೇಟ್ಟ ಸುಮಿತ್ರಾ ವಿಲಿಕ್ಕುನ್ನು, ವಡಕ್ಕುನೋಕ್ಕಿಯಂತ್ರಂ, ರಾಮ್‌ಜಿ ರಾವ್ ಸ್ಪೀಕಿಂಗ್, ಪೆರುವಣ್ಣಪುರತೆ ವಿಶೇಷಂಗಳ್‌, ಮಳವಿಲ್‌ ಕಾವಡಿ, ತೂವಲ್‌ಸ್ಪರ್ಶಂ ಸೇರಿದಂತೆ 750ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿದಾ ಪರಯುಂ ಮುಂಪೆ, ಇಲಕ್ಕಂಗಳ್ ಮತ್ತು ಒರ್ಮಕ್ಕಾಯಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿ 15 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

2014ರಲ್ಲಿ ಚಾಲಕುಡಿ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಎಲ್‌ಡಿಎಫ್‌ ಬೆಂಬಲ ಪಡೆದು ಸ್ಪರ್ಧಿಸಿ ಗೆದ್ದು ಬಂದಿದ್ದರು. ಕನ್ನಡದ ʼಶಿಕಾರಿʼ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಅವರಿಗೆ ಕ್ಯಾನ್ಸರ್‌ ಎಂದು ತಿಳಿದುಬಂದಿತ್ತು. 2015ರಲ್ಲಿ ಅವರು ತಾನೀಗ ಕ್ಯಾನ್ಸರ್‌ ಮುಕ್ತ ಎಂದು ಘೋಷಿಸಿಕೊಂಡಿದ್ದರು. ʼಲಾಫ್‌ ಇನ್‌ ದಿ ಕ್ಯಾನ್ಸರ್‌ ವಾರ್ಡ್‌ʼ ಎಂಬ ಪುಸ್ತಕದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು. ಇತ್ತೀಚೆಗೆ ಪೃಥ್ವೀರಾಜ್‌ ನಟನೆಯ ಕಡುವ ಫಿಲಂನಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version