ಕೆಜಿಎಫ್ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡದ ನಟ ಯಶ್ (Actor Yash) ಈಗ ಪ್ರಸಿದ್ಧ ಪಾನೀಯ ಪೆಪ್ಸಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ‘ನಟ ಯಶ್ ಅವರು ಪೆಪ್ಸಿ ಬಾಟಲಿ ಹಿಡಿದು, ಕಂಗ್ರಾಚ್ಯುಲೇಶನ್ಸ್ ಪೆಪ್ಸಿ, ಐ ಲವ್ ಯೂ ಎಂದು ಹೇಳಿ, ಒಂದು ಫ್ಲೈಯಿಂಗ್ ಕಿಸ್ ಕೂಡ ಕೊಟ್ಟಿದ್ದಾರೆ’ ಈ ವಿಡಿಯೊವನ್ನು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೆಪ್ಸಿ ಇಂಡಿಯಾ (Pepsi India) ಕಂಪನಿ ಕೂಡ ವಿಡಿಯೊವನ್ನು ಶೇರ್ ಮಾಡಿಕೊಂಡಿದೆ.
ಕೆಜಿಎಫ್ ಸರಣಿಯ 2 ಸಿನಿಮಾಗಳನ್ನು ಕೊಟ್ಟು ಭರ್ಜರಿ ಯಶಸ್ಸು ಕಂಡ ಯಶ್ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವೂ ಅಭಿಮಾನಿಗಳಿಗೆ ಇಲ್ಲ. ಎರಡು ದೊಡ್ಡ ಮಟ್ಟದ ಸಿನಿಮಾ ಕೊಟ್ಟ ಯಶ್ ಮುಂದೆ ಎಂಥ ಸಿನಿಮಾ ಮಾಡಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. ಈ ಮಧ್ಯೆ ಸ್ಯಾಂಡಲ್ವುಡ್ನಿಂದ, ಬಾಲಿವುಡ್ವರೆಗೆ ಖ್ಯಾತಿ ವಿಸ್ತರಿಸಿಕೊಂಡ ಯಶ್ಗೆ ಸಾಲುಸಾಲು ಜಾಹೀರಾತು ಆಫರ್ ಕೂಡ ಬರುತ್ತಿದೆ. ಅದರಲ್ಲೀಗ ಯಶ್, ಪೆಪ್ಸಿ ಇಂಡಿಯಾ ಜತೆ ಕೈಜೋಡಿಸಿದ್ದಾರೆ.
ಇಲ್ಲಿಯವರೆಗೆ ಪೆಪ್ಸಿಗೆ ಸಾಮಾನ್ಯವಾಗಿ ಬಾಲಿವುಡ್ ನಟ/ನಟಿಯರು, ಕ್ರಿಕೆಟ್ ಆಟಗಾರರೇ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿದ್ದರು. ಬಾಲಿವುಡ್ ಗಣ್ಯರಾದ ಅಮಿತಾಬ್ಬಚ್ಚನ್, ಅಮೀರ್ ಖಾನ್, ಶಾರೂಖ್ಖಾನ್, ರಣಬೀರ್ ಕಪೂರ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತಿತರರು ರಾಯಭಾರಿಗಳಾಗಿ ಈ ಪೆಪ್ಸಿ ಪಾನೀಯದ ಜನಪ್ರಿಯತೆ ಹೆಚ್ಚಿಸಿದ್ದಾರೆ. ಪೆಪ್ಸಿಯನ್ನು ಸಾಮಾನ್ಯವಾಗಿ ಯುವಜನರೇ ಇಷ್ಟಪಟ್ಟು ಕುಡಿಯುತ್ತಾರೆ. ಸದ್ಯ ಅಪಾರ ಸಂಖ್ಯೆಯಲ್ಲಿ ಯುವಜನರನ್ನು ಅಭಿಮಾನಿಗಳಾಗಿ ಹೊಂದಿರುವ, ರಾಷ್ಟ್ರ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಯಶ್ ತಮ್ಮ ಕೈಯಲ್ಲೀಗ ಪೆಪ್ಸಿ ಬಾಟಲಿ ಹಿಡಿದಿದ್ದಾರೆ. ಇನ್ನು ತಾವು ಪೆಪ್ಸಿ ಇಂಡಿಯಾಕ್ಕೆ ರಾಯಭಾರಿಯಾದ ಬಗ್ಗೆ ಯಶ್ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಉತ್ಸಾಹದಿಂದ ತಮ್ಮ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.