Site icon Vistara News

Gautam Adani : ಎನ್​ಡಿಟಿವಿ ಆಯ್ತು; ಈಗ ಸುದ್ದಿ ಸಂಸ್ಥೆ ಐಎಎನ್​ಎಸ್​ ಅದಾನಿ ಪಾಲು

Adani Group

ನವದೆಹಲಿ: ಭಾರತದ ದೈತ್ಯ ಉದ್ಯಮಿ ಗೌತಮ್ ಅದಾನಿ (Gautam Adani) ಮಾಧ್ಯಮ ಸಂಸ್ಥೆಗಳಲ್ಲಿ ಹೂಡಿಕೆಗಳನ್ನು ಮಾಡುವ ತಮ್ಮ ಯೋಜನೆಗಳನ್ನು ವಿಸ್ತರಿಸಿದ್ದಾರೆ. ಎನ್​ಡಿಟಿವಿಯನ್ನು ಖರೀದಿ ಮಾಡಿದ್ದ ಅವರೀಗ ಸುದ್ದಿ ಸಂಸ್ಥೆಯಾಗಿರುವ ಐಎಎನ್​ಎಸ್ ಯಲ್ಲಿ ಬೃಹತ್​ ಪಾಲು ಪಡೆದುಕೊಂಡಿದ್ದಾರೆ. ಬಿಲಿಯನೇರ್ ಗೌತಮ್ ಅದಾನಿ ಗ್ರೂಪ್ ಸುದ್ದಿ ಸಂಸ್ಥೆ ಐಎಎನ್ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನ ಪಾಲು ಪಡೆಯಲು ಎಷ್ಟು ಮೊತ್ತವನ್ನು ಹೂಡಿಕೆ ಮಾಡಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಅದಾನಿ ಎಂಟರ್​ಪ್ರೈಸಸ್​​ ತನ್ನ ಅಂಗಸಂಸ್ಥೆ ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ ಮೂಲಕ ಐಎಎನ್ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​​ನ ಕ್ವಿಟಿ ಷೇರುಗಳನ್ನು ಒಳಗೊಂಡ ಶೇಕಡಾ 50.50 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಷೇರುಪೇಟೆ ಲಿಖಿತ ಮಾಹಿತಿ ಸಲ್ಲಿಕೆ ತಿಳಿಸಿದೆ. ಸ್ವಾಧೀನದ ಬೆಲೆಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಕಳೆದ ವರ್ಷ ಮಾರ್ಚ್​ನಲ್ಲಿ ವ್ಯವಹಾರ ಮತ್ತು ಹಣಕಾಸು ಸುದ್ದಿ ಡಿಜಿಟಲ್ ಮಾಧ್ಯಮ ಫ್ಲ್ಯಾಟ್​ಫಾರ್ಮ್​ ಬಿಕ್ಯೂ ಪ್ರೈಮ್ ಅನ್ನು ನಿರ್ವಹಿಸುವ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅದಾನಿ ಮಾಧ್ಯಮ ವ್ಯವಹಾರಕ್ಕೆ ಕಾಲಿಟ್ಟಿದ್ದರು. ನಂತರ ಡಿಸೆಂಬರ್​ನಲ್ಲಿ ಇದು ಎನ್​ಡಿಟಿಯಲ್ಲಿ ಸುಮಾರು 65 ಪ್ರತಿಶತದಷ್ಟು ಪಾಲನ್ನು ಪಡೆದುಕೊಂಡಿತ್ತು.

ಐಎಎನ್ಎಸ್​ ಸ್ವಾಧೀನಕ್ಕಾಗಿ ತಮ್ಮ ಅಂತರ್​-ಸೇವಾ ಹಕ್ಕುಗಳನ್ನು ದಾಖಲಿಸಲು ಐಎಎನ್ಎಸ್​ನ ಷೇರುದಾರರಾಗಿರುವ ಸಂದೀಪ್ ಬಾಮ್​ಜೈ ಅವರೊಂದಿಗೆ ಅದಾನಿ ಮೀಡಿಯಾ ನೆಟ್ವರ್ಕ್​ ಲಿಮಿಟೆಡ್​​ ಷೇರುದಾರರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಷೇರುಪೇಟೆ ಲಿಖಿತ ಮಾಹಿತಿ ಸಲ್ಲಿಕೆ ಹೇಳಿದೆ. ಐಎಎನ್ಎಸ್ 2022-23ರ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023 ರವರೆಗೆ) 11.86 ಕೋಟಿ ರೂ. ಆದಾಯ ಹೊಂದಿತ್ತು.

ಐಎಎನ್ಎಸ್​​ನ ಎಲ್ಲಾ ಕಾರ್ಯಾಚರಣೆ ಮತ್ತು ನಿರ್ವಹಣಾ ನಿಯಂತ್ರಣವು ಎಎಂಎನ್ಎಲ್ ಬಳಿ ಇರುತ್ತದೆ ಮತ್ತು ಐಎಎನ್ಎಸ್​ನ ಎಲ್ಲಾ ನಿರ್ದೇಶಕರನ್ನು ನೇಮಿಸುವ ಹಕ್ಕನ್ನು ಎಎಂಎನ್ಎಲ್ ಹೊಂದಿರುತ್ತದೆ ಎಂದು ಷೇರುಪೇಟೆ ಲಿಖಿತ ಮಾಹಿತಿ ಸಲ್ಲಿಕೆ ಹೇಳಿದೆ.

ಇದನ್ನೂ ಓದಿ: Congress Party : ಲೋಕ ಸಭೆ ಚುನಾವಣೆ ಖರ್ಚಿಗೆ ಕಾಂಗ್ರೆಸ್​ನಿಂದ ಕ್ರೌಡ್ ಫಂಡಿಂಗ್

ಸ್ವಾಧೀನಗೊಂಡ ಬಳಿಕ ಐಎಎನ್ಎಸ್ ಎಎಂಎನ್ಎಲ್​​ನ ಅಂಗಸಂಸ್ಥೆಯಾಗಲಿದೆ. ಮೊದಲ ತಲೆಮಾರಿನ ಉದ್ಯಮಿಯಾದ ಅದಾನಿ 1988 ರಲ್ಲಿ ಸರಕುಗಳ ವ್ಯಾಪಾರಿಯಾಗಿ ಉದ್ಯಮ ಪ್ರಾರಂಭಿಸಿದರು. ಇದೀಗ 13 ಬಂದರುಗಳು ಮತ್ತು ಎಂಟು ವಿಮಾನ ನಿಲ್ದಾಣಗಳೊಂದಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತದ ಅತಿದೊಡ್ಡ ಖಾಸಗಿ ಸಂಸ್ಥೆಯಾಗಿ ಬೆಳೆದಿದೆ. ಕಲ್ಲಿದ್ದಲು, ಇಂಧನ ವಿತರಣೆ, ದತ್ತಾಂಶ ಕೇಂದ್ರಗಳು ಮತ್ತು ಇತ್ತೀಚೆಗೆ ಸಿಮೆಂಟ್ ಮತ್ತು ತಾಮ್ರದ ಉದ್ಯಮಕ್ಕೆ ಇಳಿದಿದ್ದಾರೆ. ಇದು ಖಾಸಗಿ ನೆಟ್ವರ್ಕ್ ಸ್ಥಾಪಿಸಲು 5 ಜಿ ಟೆಲಿಕಾಂ ಸ್ಪೆಕ್ಟ್ರಮ್ ಅನ್ನು ಬಿಡ್ ಮಾಡಿ ಸ್ವಾಧೀನಪಡಿಸಿಕೊಂಡಿಡಿದ್ದಾರೆ.

Exit mobile version