ಅಹಮದಾಬಾದ್: ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯ ವರದಿಯ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಿಸ್(Adani Group) ಭಾರೀ ಸಂಕಷ್ಟಕ್ಕೆ ಸಿಲುಕಿದೆ. ನಷ್ಟವನ್ನು ತುಂಬಿಕೊಳ್ಳಲು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಫಾಲೋ-ಆನ್ ಪಬ್ಲಿಕ್ ಆಫರ್(follow-on public offer – FPO)) ವಾಪಸ್ ಪಡೆಯಲು ನಿರ್ಧರಿಸಿದೆ. ಅಲ್ಲದೇ ಹೂಡಿಕೆದಾರರಿಗೆ ಹಣವನ್ನು ವಾಪಸ್ ಮಾಡಲಿದೆ. ಅದಾನಿ ಕಂಪನಿ 20,000 ಕೋಟಿ ರೂ. ಎಫ್‌ಪಿಒ ಪ್ರೀಮಿಯಂ ಬೆಲೆ ಬ್ಯಾಂಡ್‌ನಲ್ಲಿ 3,112 ರೂ. ಮತ್ತು ಪ್ರತಿ ಎಫ್‌ಪಿಒ ಈಕ್ವಿಟಿ ಷೇರಿಗೆ 3,276 ರೂ. ಆಫರ್ ಮಾಡಿತ್ತು. ಇದು ಜನವರಿ 31ಕ್ಕೆ ಮುಕ್ತಾಯವಾಗಿದೆ.
ಈ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್‌ನ ಚೇರ್‌ಮನ್ ಗೌತಮ್ ಅದಾನಿಯವರು ಷೇರುದಾರರಿಗೆ ಪತ್ರವೊಂದನ್ನು ಬರೆದಿದ್ದಾರೆ. ಮಾರುಕಟ್ಟೆಯಲ್ಲಿ ನಮ್ಮ ಷೇರುಗಳ ಭಾರೀ ಏರಿಳಿತಗಳನ್ನು ಕಂಡಿವೆ. ಹೀಗಾಗಿ, ಇಂಥ ಸಂದರ್ಭದಲ್ಲಿ ಎಫ್‌ಪಿಒ ಹಣದೊಂದಿಗೆ ಮುಂದೆ ಹೋಗುವುದು ನೈತಿಕವಾಗಿ ಸರಿಯಲ್ಲ. ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡುವುದು ನಮಗೆ ಮುಖ್ಯ. ಆದ್ದರಿಂದ ಸಂಭಾವ್ಯ ನಷ್ಟದಿಂದ ಅವರನ್ನು ರಕ್ಷಿಸಲು ಕಂಪನಿಯು ಎಫ್‌ಪಿಒಗಳೊಂದಿಗೆ ಮುಂದುವರಿಯುವ ನಿರ್ಧಾರವನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Stock Market Crash : ಅದಾನಿ ಗ್ರೂಪ್ ಷೇರು ದರದಲ್ಲಿ 30% ತನಕ ಭಾರಿ ಕುಸಿತ
ಅದಾನಿ ಎಂಟರ್‌ಪ್ರೈಸಸ್ ಲಿ. ಸಂಪೂರ್ಣ ಚಂದಾದಾರಿಕೆ ಹೊಂದಿರುವ ಎಫ್‌ಪಿಒಗಳೊಂದಿಗೆ ಮುಂದುವರಿಯದಂತೆ ನಿರ್ಧರಿಸಿದೆ. ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯಯ ಹಿನ್ನೆಲೆಯಲ್ಲಿ ಎಫ್‌ಪಿಒ ಆದಾಯವನ್ನು ಹಿಂದಿರಿಸುವ ನಿರ್ಧಾರವನ್ನು ಕೈಗೊಂಡಿದೆ. ಆ ಮೂಲಕ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.