ನವದೆಹಲಿ: ನಿರಂತರವಾಗಿ ದೇಶಿ ಹಾಗೂ ಅಂತಾರಾಷ್ಟ್ರೀಯ ಹೂಡಿಕೆದಾರರಿಂದ (Investors) ಷೇರುಗಳ ಖರೀದಿಯ ಪರಿಣಾಮ ಅದಾನಿ ಗ್ರೂಪ್ (Adani Group)ನ ಮಾರುಕಟ್ಟೆ ಬಂಡವಾಳದ ಮೌಲ್ಯ (market capitalisation) ಶುಕ್ರವಾರ 11 ಲಕ್ಷ ಕೋಟಿ ರೂ. ದಾಟಿದೆ. ಬಂದರುಗಳಿಂದ ಹಿಡಿದು ಇಂಧನದವರೆಗಿನ ಉದ್ಯಮಗಳನ್ನು ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯಕ್ಕೆ ಶುಕ್ರವಾರ 7,039 ಕೋಟಿ ರೂ. ಸೇರ್ಪಡೆಯಾಯಿತು. ಅದಾನಿ ಸಮೂಹದ ಲಿಸ್ಟ್ ಮಾಡಲಾದ ಹತ್ತು ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಈಗ 11.02 ಲಕ್ಷ ಕೋಟಿ ರೂ.ಆಗಿದೆ. ಗುರುವಾರ ಈ ಮೌಲ್ಯ 10.96 ಲಕ್ಷ ಕೋಟಿ ರೂ. ಇತ್ತು.
ಹಿಂಡೆನ್‌ಬರ್ಗ್ ವರದಿ ಪ್ರಕಟಗೊಂಡ ಬಳಿಕ ಕನಿಷ್ಠ ಮಟ್ಟದಿಂದ ಗಮನಾರ್ಹವಾಗಿ ಅದಾನಿ ಗ್ರೂಪ್ ಕಂಪನಿಯ ಷೇರುಗಳು ಚೇತರಿಸಿಕೊಂಡಿವೆ. 2023ರ ಮಾರ್ಚ್ ಆರಂಭದಿಂದ ಈವರೆಗೆ 5 ಲಕ್ಷ ಕೋಟಿ ರೂ. ಮೌಲ್ಯ ಏರಿಕೆಯಾಗಿದೆ. ಅದಾನಿ ಗ್ರೂಪ್‌ನ ಕಾರ್ಯತಂತ್ರದ ಗಮನ, ನಿಧಿಸಂಗ್ರಹಣೆಯ ಮೇಲಿನ ಉಪಕ್ರಮಗಳು ಮತ್ತು ಇಂಧನದ ಅಗಾಧ ಬೇಡಿಕೆಯ ನಡುವೆ ವಿದ್ಯುತ್ ವ್ಯವಹಾರ ಹಾಗೂ ಮೂಲ ಸೌಕರ್ಯದ ಕ್ಷೇತ್ರದಲ್ಲಿನ ನಿರಂತರ ಹೂಡಿಕೆಯ ಪರಿಣಾಮ ಅದಾನಿ ಸಮೂಹದ ಷೇರುಗಳು ಗಣನೀಯವಾಗಿ ಏರಿಕೆ ಕಂಡಿವೆ.
ಹೂಡಿಕೆದಾರರು ಅದಾನಿಯವರ ವೈವಿಧ್ಯಮಯ ವ್ಯವಹಾರ ಮಾದರಿಯಲ್ಲಿ ಮೌಲ್ಯವನ್ನು ಗುರುತಿಸುತ್ತಿದ್ದು, ವಿಶೇಷವಾಗಿ ಗ್ರೂಪ್‌ನ ನಿಧಿಸಂಗ್ರಹಣೆ ಪ್ರಯತ್ನಗಳು ಮತ್ತು ಯೋಜನೆಯ ಕಾರ್ಯಗತಗೊಳಿಸುವಿಕೆಯು ಪರಿಣಾಮ ಬೀರಿದೆ. ಬಲವಾದ ದೇಶೀಯ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತದ ಇಂಧನ ಬೇಡಿಕೆಯು ಗಣನೀಯವಾಗಿ ಹೆಚ್ಚಾಗುವುದರಿಂದ ಮುಂಬರುವ ವರ್ಷಗಳಲ್ಲಿ ಇಂಧನ ಪ್ರಮುಖ ವಿಷಯವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರವೃತ್ತಿಯು ಮುಂಬರುವ ತಿಂಗಳಲ್ಲಿ ಅದಾನಿ ಗ್ರೂಪ್ ಷೇರುಗಳಿಗೆ ಇನ್ನಷ್ಟು ಬಲವನ್ನು ತಂದುಕೊಡಲಿವೆ ಎಂದು ಷೇರು ಮಾರಕಟ್ಟೆಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Adani Group: ಸಂಘಿ ಸಿಮೆಂಟ್ ಕಂಪನಿ ಈಗ ಅದಾನಿ ಗ್ರೂಪ್ ಪಾಲು; ಇದು ಎಷ್ಟು ಸಾವಿರ ಕೋಟಿ ರೂ. ಡೀಲ್?
ಶುಕ್ರವಾರ ಅದಾನಿ ಗ್ರೂಪ್‌ನ ಷೇರುಗಳು ಅತಿ ಹೆಚ್ಚು ಏರಿಕೆಯನ್ನು ದಾಖಲಿಸಿದವು. ಇದು ಕಳೆದ 10 ತಿಂಗಳಲ್ಲೇ ಗರಿಷ್ಠ ಏರಿಕೆಯಾಗಿದ್ದು, 369.15 ರೂ.ವರೆಗೂ ತಲುಪಿದೆ. 2022ರ ನವೆಂಬರ್‌ನಲ್ಲಿ ಅದಾನಿ ಗ್ರೂಪ್‌ನ ಷೇರುಗಳು ಇಷ್ಟೇ ಮೌಲ್ಯವನ್ನು ಹೊಂದಿದ್ದವು. ಕಂಪನಿಯ ಕಾರ್ಯಾಚರಣೆಯ ಪ್ರದರ್ಶನ ಮ್ತತು ವ್ಯೂಹಾತ್ಮಕ ಉಪಕ್ರಮಗಳು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿವೆ. ಇದು ಷೇರುಗಳ ಖರೀದಿಯಲ್ಲಿ ವ್ಯಕ್ತವಾಗಿದೆ.
ಶುಕ್ರವಾರ ಷೇರುಪೇಟೆಯಲ್ಲಿ ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಎಸ್‌ಇಜೆಡ್ ಮತ್ತು ಅದಾನಿ ಮಿಲ್ಮಾರ್ ಷೇರುಗಳು ಹೆಚ್ಚು ಲಾಭವನ್ನು ದಾಖಲಿಸಿವೆ.
ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.