ಮುಂಬೈ: ಗೌತಮ್ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್ ಷೇರುಗಳ (Adani Stocks) ಮೌಲ್ಯವು ಮಂಗಳವಾರ (ನವೆಂಬರ್ 18) ದಿಢೀರನೇ ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ವಹಿವಾಟು (Share Market) ಆರಂಭವಾಗುತ್ತಲೇ ಅದಾನಿ ಗ್ರೂಪ್ ಷೇರುಗಳ ಮೌಲ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದಾನಿ ಗ್ರೂಪ್ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗ್ಗೆ ಟ್ರೇಡಿಂಗ್ ಆರಂಭವಾಗುತ್ತಲೇ ಅದಾನಿ ಟೋಟಲ್ ಗ್ಯಾಸ್‌ನ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಯಿತು. ಹಾಗೆಯೇ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಷೇರುಗಳ ಬೆಲೆ ಶೇ.13ರಷ್ಟು ಏರಿಕೆ ಕಂಡಿತು. ನಿಫ್ಟಿ ಸ್ಟಾಕ್ಸ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಸೇರಿ ಹಲವು ಅಂಗಸಂಸ್ಥೆಗಳ ಷೇರುಗಳ ಮೌಲ್ಯವು ಶೇ.3-4ರಷ್ಟು ಏರಿಕೆಯಾಗಿದೆ. ಅಲ್ಲದೆ ಅದಾನಿ ಗ್ರೂಪ್ ವ್ಯಾಪ್ತಿಗೆ ಬರುವ ಎನ್‌ಡಿಟಿವಿ, ಎಸಿಸಿ, ಅಂಬುಜಾ ಸಿಮೆಂಟ್ ಕಂಪನಿಗಳ ಮೌಲ್ಯವೂ ಏರಿಕೆಯಾಗಿದೆ. ಎನ್‌ಡಿಟಿವಿ ಷೇರುಗಳ ಮೌಲ್ಯ ಶೇ.7.78ರಷ್ಟು, ಅಂಬುಜಾ ಸಿಮೆಂಟ್ ಶೇ.3.73ರಷ್ಟು ಹಾಗೂ ಎಸಿಸಿಯು ಶೇ.3.02ರಷ್ಟು ಏರಿಕೆ ಕಂಡಿದೆ.
Adani stocks are in full Josh mode today 👍🏻 pic.twitter.com/CFVQHZpynV
— PNG stock talks (@pngstockadvisor) November 28, 2023
ದಿಢೀರ್ ಏರಿಕೆಗೆ ಕಾರಣ ಏನು?
ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿಯಲ್ಲಿ ಮಾಡಲಾದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಮಾರುಕಟ್ಟೆ ನಿಯಂತ್ರಕ ಸೆಬಿಯನ್ನು (SEBI) ಅನುಮಾನಿಸಲು ಸಾಧ್ಯವಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಹೇಳಿರುವುದೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರುಗಳ ಮೌಲ್ಯ ದಿಢೀರನೆ ಏರಿಕೆಯಾಗಲು ಕಾರಣ ಎಂದು ತಿಳಿದುಬಂದಿದೆ. “ತನಿಖೆ ನಡೆಸುತ್ತಿರುವ ಸೆಬಿಯು ಎಲ್ಲ ರೀತಿಯ ತನಿಖೆ ಮುಗಿಸಲಿ. ಅಲ್ಲದೆ, ಸೆಬಿಯನ್ನು ಅನುಮಾನಿಸಲು ಆಗುವುದಿಲ್ಲ ಹಾಗೂ ಹಿಂಡನ್‌ಬರ್ಗ್ ವರದಿಯ ಎಲ್ಲ ಆರೋಪಗಳನ್ನು ನಿಜ ಎಂದು ಭಾವಿಸಬೇಕಿಲ್ಲ. ತನಿಖೆಗೆ ಎಸ್‌ಐಟಿ ರಚಿಸುವ ಅವಶ್ಯಕತೆ ಇಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಇದನ್ನೂ ಓದಿ: Sri Lanka Port: ಶ್ರೀಲಂಕಾದಲ್ಲಿ ಭಾರತದ ಇನ್ನಷ್ಟು ಪ್ರಭಾವ; ಅದಾನಿ ಟರ್ಮಿನಲ್‌ನಲ್ಲಿ ಅಮೆರಿಕ ಭಾರಿ ಹೂಡಿಕೆ
ಅದಾನಿ ಗ್ರೂಪ್‌ಗೆ ಭಾರಿ ಲಾಭ
ಕಳೆದ ವರ್ಷಕ್ಕೆ (2022) ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (2023) ಅದಾನಿ ಪವರ್ ಕಂಪನಿಯ ಏಕೀಕೃತ ಲಾಭವು ಒಂಬತ್ತು ಪಟ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ. 2023- 2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ತೆರಿಗೆ ನಂತರದ ಏಕೀಕೃತ ಲಾಭವು ಶೇಕಡಾ 848ರಷ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ ಎಂದು ಕಂಪನಿಯು ತಿಳಿಸಿದೆ. ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ ಷೇರುಗಳ ಮೌಲ್ಯ ಕುಸಿದಿತ್ತು. ಇದರಿಂದ ಹೂಡಿಕೆದಾರರಿಗೆ ನಷ್ಟವುಂಟಾಗಿತ್ತು. ಅಲ್ಲದೆ, ಅದಾನಿ ಗ್ರೂಪ್ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ