ದಾವೋಸ್: ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆಗಾಗ ಟೀಕಾಸ್ತ್ರ ಪ್ರಯೋಗಿಸುತ್ತಾರೆ. ಆದರೆ, ತೆಲಂಗಾಣದಲ್ಲಿ ಅದಾನಿ ಗ್ರೂಪ್‌ನಿಂದ (Adani Group) 12,400 ಕೋಟಿ ರೂ. ಹೂಡಿಕೆಗಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಅವರು ಗೌತಮ್ ಅದಾನಿ ಅವರ ಜತೆ ಒಡಂಬಡಿಕೆ (MoU) ಮಾಡಿಕೊಂಡಿದ್ದಾರೆ. ಇದರಿಂದಾಗಿ ತೆಲಂಗಾಣದ ಹಲವು ಕ್ಷೇತ್ರಗಳಲ್ಲಿ ಅದಾನಿ ಗ್ರೂಪ್ 12,400 ಕೋಟಿ ರೂ. ಹೂಡಿಕೆ ಮಾಡಲಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ, ವ್ಯಂಗ್ಯ, ಟೀಕೆಗಳಿಗೆ ಕಾರಣವಾಗಿದೆ.
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ರೇವಂತ್ ರೆಡ್ಡಿ, ಕೈಗಾರಿಕೆ ಸಚಿವ ಡಿ. ಶ್ರೀಧರ್ ಬಾಬು ಸೇರಿ ಹಲವು ಸಚಿವರನ್ನೊಳಗೊಂಡ ನಿಯೋಗವು ಅದಾನಿ ಗ್ರೂಪ್ ಜತೆ ಮಾಡಿಕೊಂಡ ನಾಲ್ಕು ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಮಾತನಾಡಿದ ಗೌತಮ್ ಅದಾನಿ, “ತೆಲಂಗಾಣ ರಾಜ್ಯವು ಹೂಡಿಕೆ ಸ್ನೇಹಿಯಾಗಿದೆ. ಹೊಸ ನೀತಿಗಳು, ಯೋಜನೆಗಳಿಂದಾಗಿ ಮುಂದಿನ ದಿನಗಳಲ್ಲೂ ತೆಲಂಗಾಣವು ಹೆಚ್ಚಿನ ಹೂಡಿಕೆಯನ್ನು ಸೆಳೆಯಲಿದೆ” ಎಂದು ಹೇಳಿದ್ದಾರೆ.
CM Revanth Reddy held a hour-long meeting with Gautam Adani at Davos about new business opportunities for Telangana across various sectors pic.twitter.com/vM6jQEr1RA
— Naveena (@TheNaveena) January 17, 2024
ತೆಲಂಗಾಣದಲ್ಲಿ 1,350 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ಅದಾನಿ ಗ್ರೀನ್ ಎನರ್ಜಿಯು 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇನ್ನು ಚಂದನ್‌ವೆಲ್ಲಿಯಲ್ಲಿ 100 ಮೆಗಾ ವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಕ್ಯಾಂಪಸ್ ನಿರ್ಮಾಣಕ್ಕೆ ಅದಾನಿ ಕನೆಕ್ಸ್ ಡೇಟಾ ಸೆಂಟರ್ಸ್ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ತೆಲಂಗಾಣದಲ್ಲಿ ಗ್ರೈಂಡಿಂಗ್ ಯುನಿಟ್ ಸ್ಥಾಪಿಸಲು ಅಂಬುಜಾ ಸಿಮೆಂಟ್ 1,400 ಕೋಟಿ ರೂ., ಅದಾನಿ ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ ಕಂಪನಿಯು ಕೌಂಟರ್ ಡ್ರೋನ್ ಸಿಸ್ಟಮ್‌ಗಳು, ಕ್ಷಿಪಣಿ ಅಭಿವೃದ್ಧಿ ಮತ್ತು ಉತ್ಪಾದನೆ ಕೇಂದ್ರಗಳನ್ನು ಸ್ಥಾಪಿಸಲು 1 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಇವೆಲ್ಲ ಅದಾನಿ ಗ್ರೂಪ್ ಒಡೆತನದ ಕಂಪನಿಗಳಾಗಿವೆ.
ಇದನ್ನೂ ಓದಿ: Gautam Adani: ಕೋರ್ಟ್ ರಿಲೀಫ್ ಬೆನ್ನಲ್ಲೇ ಗೌತಮ್ ಅದಾನಿ ದೇಶದ ನಂಬರ್ 1 ಶ್ರೀಮಂತ!
ಗುಜರಾತ್‌ನಲ್ಲಿ 2 ಲಕ್ಷ ಕೋಟಿ ರೂ. ಹೂಡಿಕೆ
ಕೆಲ ದಿನಗಳ ಹಿಂದೆ ಗುಜರಾತ್‌ನಲ್ಲಿ ನಡೆದ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್‌ನಲ್ಲಿ ಗೌತಮ್ ಅದಾನಿ ಭಾಗವಹಿಸಿದ್ದರು. ಇದೆ ವೇಳೆ ಅವರು, “ಗುಜರಾತ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ ಅದಾನಿ ಗ್ರೂಪ್ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ 1 ಲಕ್ಷ ಜನರಿಗೆ ನೇರವಾಗಿ ಉದ್ಯೋಗ ದೊರೆಯಲಿದೆ” ಎಂದು ಘೋಷಿಸಿದರು. “ಮರು ನವೀಕರಣ ಸಂಪನ್ಮೂಲದ ಬಳಕೆ, ಸೋಲಾರ್ ಪ್ಯಾನೆಲ್‌ಗಳ ಅಳವಡಿಕೆ ಸೇರಿ ಹಲವು ದಿಸೆಯಲ್ಲಿ ಅದಾನಿ ಗ್ರೂಪ್ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬೆಂಬಲ ನೀಡುತ್ತಿದೆ” ಎಂದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ