Site icon Vistara News

ಹಿಂಡನ್‌ಬರ್ಗ್‌ ಕೇಸ್; ಅದಾನಿಗೆ ಬಿಗ್‌ ರಿಲೀಫ್, ಸೆಬಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ ಎಂದ ಸುಪ್ರೀಂ

Gautam Adani

Adani Hindenburg Case: Supreme Court refuses to interfere with SEBI's probe

ನವದೆಹಲಿ: ಗೌತಮ್‌ ಅದಾನಿ-ಹಿಂಡನ್‌ಬರ್ಗ್‌ ವರದಿ (Adani Hindenburg Case) ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ (Supreme Court) ಸ್ಪಷ್ಟಪಡಿಸಿದೆ. “ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಲು ಆಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದರಿಂದಾಗಿ ಗೌತಮ್‌ ಅದಾನಿ (Gautam Adani) ನೇತೃತ್ವದ ಗ್ರೂಪ್‌ಗೆ ರಿಲೀಫ್‌ ಸಿಕ್ಕಂತಾಗಿದೆ. ಹಾಗೆಯೇ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಕೂಡ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಸೆಬಿ ತನಿಖೆಗೆ 3 ತಿಂಗಳ ಗಡುವು

ಅದಾನಿ-ಹಿಂಡನ್‌ಬರ್ಗ್‌ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಎರಡು ವಿಷಯಗಳ ಕುರಿತು ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಸೆಬಿಗೆ ಸುಪ್ರೀಂ ಕೋರ್ಟ್‌ ತಿಳಿಸಿದೆ. “ಪ್ರಕರಣದ 22 ವಿಷಯಗಳ ಪೈಕಿ 20 ವಿಷಯಗಳ ಕುರಿತು ಈಗಾಗಲೇ ಸೆಬಿ ತನಿಖೆ ಮುಗಿಸಿದೆ. ಸಾಲಿಸಿಟರ್‌ ಜನರಲ್‌ ಅವರು ಭರವಸೆ ನೀಡಿದ ಕಾರಣ ಮೂರು ತಿಂಗಳಲ್ಲಿ ಎರಡು ವಿಷಯಗಳ ಕುರಿತು ಸೆಬಿ ತನಿಖೆ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು. ಹಾಗೆಯೇ, ಪ್ರಕರಣದ ಕುರಿತಂತೆ ಕೇಂದ್ರ ಸರ್ಕಾರ ಕೂಡ ನಿಗಾ ವಹಿಸಬೇಕು ಎಂದು ಕೂಡ ಸೂಚಿಸಿದೆ.

ಸತ್ಯಕ್ಕೆ ಜಯ ಎಂದ ಗೌತಮ್‌ ಅದಾನಿ

ಹಿಂಡನ್‌ಬರ್ಗ್‌ ವರದಿ ಕುರಿತು ಸೆಬಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಹಾಗೂ ಎಸ್‌ಐಟಿ ತನಿಖೆಗೆ ವಹಿಸಲು ಸರಿಯಾದ ಸಾಕ್ಷ್ಯಾಧಾರಗಳು ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿರುವುದಕ್ಕೆ ಗೌತಮ್‌ ಅದಾನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ. ಇದು ಸತ್ಯಕ್ಕೆ ಸಂದ ಜಯ. ಸತ್ಯಮೇವ ಜಯತೆ” ಎಂದು ಗೌತಮ್‌ ಅದಾನಿ ಹೇಳಿದ್ದಾರೆ.

ಏನಿದು ಹಿಂಡನ್‌ಬರ್ಗ್‌ ವರದಿ ಕೇಸ್?‌

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ಸಂಚಲನ ಮೂಡಿಸಿದೆ. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: Gautam Adani : ಎನ್​ಡಿಟಿವಿ ಆಯ್ತು; ಈಗ ಸುದ್ದಿ ಸಂಸ್ಥೆ ಐಎಎನ್​ಎಸ್​ ಅದಾನಿ ಪಾಲು

ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲವಾಗಿದೆ. ಹಾಗಾಗಿ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ, ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. “ಅದಾನಿ ಗ್ರೂಪ್‌ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ” ಎಂದು ಉಲ್ಲೇಖಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version