ನವ ದೆಹಲಿ: ಷೇರು ಮಾರುಕಟ್ಟೆಯಲ್ಲಿ ಗೌತಮ್ ಅದಾನಿ ಅವರ ಕಂಪನಿ ಷೇರುಗಳ ಮೌಲ್ಯ ಶುಕ್ರವಾರ ನೆಲಕಚ್ಚಿದ ಹಿನ್ನೆಲೆಯಲ್ಲಿ, ಎಸ್‌ಬಿಐ, ಎಲ್‌ಐಸಿ ಮುಂತಾದ ಸಾರ್ವಜನಿಕ ವಲಯದ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿರುವವರು ಕೂಡ ಭೀತರಾಗಿದ್ದಾರೆ. ಈ ಸಂಸ್ಥೆಗಳು ಕೂಡ ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ಇದಕ್ಕೆ ಕಾರಣ.
ಕೋಟ್ಯಂತರ ಭಾರತೀಯರು ಹೂಡಿಕೆ ಮಾಡಿರುವ ಈ ಸಾರ್ವಜನಿಕ ಸಂಸ್ಥೆಗಳಿಂದ ಅದಾನಿ ಗ್ರೂಪ್ ಸಾಕಷ್ಟು ಹಣ ಪಡೆದಿರುವುದರಿಂದ, ಈ ಹಣಕಾಸಿನ ಸ್ಥಿರತೆಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಹಿಂಡೆನ್‌ಬರ್ಗ್ ವರದಿಯ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ʼʼಅದಾನಿ ಗ್ರೂಪ್ ಒಂದು ಸಾಮಾನ್ಯ ಸಂಸ್ಥೆಯಲ್ಲ. ಅದು ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದೆʼʼ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಸಂಸ್ಥೆಗಳು ಅದಾನಿ ಗ್ರೂಪ್‌ಗೆ ಉದಾರವಾಗಿ ಹಣಕಾಸು ಒದಗಿಸಿವೆ. ಎಲ್‌ಐಸಿಯ ಈಕ್ವಿಟಿ ಆಸ್ತಿಯ 8 ಪ್ರತಿಶತದಷ್ಟು ಅಂದರೆ ಸುಮಾರು ₹ 74,000 ಕೋಟಿಯಷ್ಟು ಬೃಹತ್ ಮೊತ್ತ ಅದಾನಿ ಕಂಪನಿಗಳಲ್ಲಿದೆ. ಮತ್ತು ಇದು ಅದಾನಿ ಗ್ರೂಪ್‌ನಲ್ಲಿರುವ ಎರಡನೇ ಅತಿ ದೊಡ್ಡ ಹಿಡುವಳಿದಾರ ಆಗಿದೆ ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ. ಇದು ಕೋಟ್ಯಂತರ ಭಾರತೀಯರ ಹೂಡಿಕೆಯನ್ನು ನಾಶ ಮಾಡಲಿದೆ ಎಂದು ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಆತಂಕಪಟ್ಟಿದ್ದಾರೆ.
ಶುಕ್ರವಾರ ಅದಾನಿ ಗ್ರೂಪ್ ಷೇರುಗಳು ಕುಸಿಯುವುದರ ಜತೆಗೆ ಅವುಗಳಿಗೆ ಸಾಲ ನೀಡಿದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳೂ ಕುಸಿತ ಕಂಡವು. ಆದರೆ ಅದಾನಿ ಗ್ರೂಪ್‌ನಲ್ಲಿ ತಮ್ಮ ಹೂಡಿಕೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ಮಿತಿಯಲ್ಲಿದೆ ಎಂದು ಈ ಕಂಪನಿಗಳು ಹೇಳಿವೆ. ಯಾವುದೇ ಒಂದು ಕಂಪನಿಗಳ ಗ್ರೂಪ್‌ಗೆ ತಮ್ಮ ಅರ್ಹ ಬಂಡವಾಳದ 25%ಕ್ಕಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಲು ಆರ್‌ಬಿಐ ಅನುಮತಿಸುವುದಿಲ್ಲ.
ಇದನ್ನೂ ಓದಿ: Adani stocks : ಹಿಂಡೆನ್‌ಬರ್ಗ್ ವರದಿ ಎಫೆಕ್ಟ್, ಅದಾನಿ ಹೆಚ್ಚುವರಿ ಷೇರು ಬಿಡುಗಡೆ ನೀರಸ, ಮೊದಲ ದಿನ ಕೇವಲ 1% ಷೇರು ಖರೀದಿ
ನಮ್ಮ ಹೂಡಿಕೆಗೆ ಸದ್ಯ ಯಾವುದೇ ಅಪಾಯವಿಲ್ಲ ಎಂದು ಎಸ್‌ಬಿಐ ಚೇರ್‌ಮನ್ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ. ಇತ್ತೀಚೆಗೆ ಅದಾನಿ ಗ್ರೂಪ್ ನಮ್ಮಿಂದ ಯಾವುದೇ ಸಾಲ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಅಂಥ ಬೇಡಿಕೆ ಬಂದರೆ ವಿವೇಚನೆಯಿಂದ ಪರಿಗಣಿಸುತ್ತೇವೆ ಎಂದು ಖಾರಾ ಹೇಳಿದ್ದಾರೆ.
ಅದಾನಿ ಗ್ರೂಪನ್ನು ಎಸ್‌ಬಿಐ ಸಂಪರ್ಕಿಸಿದ್ದು, ಬೆಳವಣಿಗೆಯ ಬಗ್ಗೆ ವಿವರಣೆ ಕೇಳಿದ್ದೇವೆ. ಅದರ ನಂತರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಎಸ್‌ಬಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಮ್ಮ ಎಲ್ಲ ಸಾಲ ನೀಡಿಕೆಯೂ ಆರ್‌ಬಿಐ ನಿಗದಿಪಡಿಸಿದ ಮಿತಿಯೊಳಗೇ ಇದೆ. ಕಳೆದ ತಿಂಗಳವರೆಗೂ ಅದಾನಿ ಗುಂಪಿನ ಮರುಪಾವತಿ ಸಮರ್ಪಕವಾಗಿಯೇ ಇತ್ತು ಎಂದವರು ತಿಳಿಸಿದ್ದಾರೆ.
ಎಲ್‌ಐಸಿ ಕೂಡ ಅದಾನಿ ಗ್ರೂಪ್‌ನ ಮೇಲಿನ ವಂಚನೆ ಆರೋಪಗಳಿಂದ ವಿಚಲಿತಗೊಂಡಿಲ್ಲ. ಈ ಸಂದರ್ಭದಲ್ಲಿ ಅದು ಅದಾನಿ ಗುಂಪಿನ ನೆರವಿಗೆ ಬಂದಿದ್ದು, 301 ಕೋಟಿ ರೂ.ಗಳನ್ನು ಒದಗಿಸುತ್ತಿದೆ. ಅದಾನಿ ಸಂಸ್ಥೆಗಳ ನೂತನ 20,000 ಕೋಟಿ ಮೌಲ್ಯದ ಷೇರು ಮಾರಾಟದಲ್ಲಿ ಎಲ್‌ಐಸಿ ಈ ಹೂಡಿಕೆಗೆ ಮುಂದಾಗಿದೆ. ಎಲ್‌ಐಸಿಯು ಅದಾನಿ ಸಂಸ್ಥೆಗಳಲ್ಲಿ ಶೇ.4.23ರಷ್ಟು ಮೌಲ್ಯದ ಹೂಡಿಕೆ ಹೊಂದಿದೆ.
ಅದಾನಿ ಗ್ರೂಪ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿ., ಅದಾನಿ ಪೋರ್ಟ್ಸ್ ಆಂಡ್ ಎಕಾನಮಿಕ್ ಜೋನ್ಸ್ ಲಿ., ಅದಾನಿ ಗ್ರೀನ್ ಎನರ್ಜಿ ಲಿ., ಅದಾನಿ ಟ್ರಾನ್ಸ್‌ಮಿಶನ್ ಲಿ. ಇವೆ. ಹಿಂಡೆನ್‌ಬರ್ಗ್ ಸಂಸ್ಥೆಯ ಮೇಲೆ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಅದಾನಿ ಗ್ರೂಪ್ ಹೇಳಿದೆ. ತನ್ನ ಬಳಿ ವರದಿಗೆ ದಾಖಲೆಗಳಿವೆ ಎಂದು ಹಿಂಡೆನ್‌ಬರ್ಗ್ ಪ್ರತ್ಯುತ್ತರಿಸಿದೆ.
ಇದನ್ನೂ ಓದಿ: Adani Stocks : ವಂಚನೆಯ ಆರೋಪ, ಅದಾನಿ ಗ್ರೂಪ್ ಷೇರುಗಳಿಗೆ 46,000 ಕೋಟಿ ರೂ. ನಷ್ಟ, ಸಮೂಹ ಹೇಳಿದ್ದೇನು?