ನವದೆಹಲಿ: ಜಿ20 ಶೃಂಗಸಭೆಯಲ್ಲಿ (G20 Summit 2023) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ರಮವನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಟೀಕಿಸಿದ್ದಾರೆ. ಈ ಮೂಲಕ ಪ್ರತಿಪಕ್ಷಗಳ ʼಇಂಡಿಯಾʼ ಕೂಟದಲ್ಲಿ ಮತ್ತೊಂದು ಬಿಕ್ಕಟ್ಟು ಎದುರಾಗಿದೆ.
ಔತಣ ಕೂಟದಲ್ಲಿ ಭಾಗವಹಿಸುವುದರಿಂದ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧದ ಮಮತಾ ಅವರ ನಿಲುವು ದುರ್ಬಲವಾಗುವುದಿಲ್ಲವೇ? ಈ ಔತಣಕೂಟದಲ್ಲಿ ಪಾಲ್ಗೊಳ್ಳುವುದಕ್ಕೆ ʼಇತರ ಕಾರಣʼಗಳೆನಾದರೂ ಇದೆಯೇ ಎಂಬ ಕುತೂಹಲವನ್ನು ಚೌಧರಿ ವ್ಯಕ್ತಪಡಿಸಿದ್ದಾರೆ. ಇತ್ತ, ಆಡಳಿತಾತ್ಮಕ ಶಿಷ್ಟಾಚಾರಗಳಿಂದ ಮಮತಾ ಅವರು ಪಾಲ್ಗೊಂಡಿದ್ದನ್ನು ಈ ರೀತಿಯಲ್ಲಿ ಟೀಕಿಸಲು ಕಾರಣವಿಲ್ಲ. ʻಇಂಡಿಯ ಬ್ಲಾಕ್ʼ ಸ್ಥಾಪನೆಯ ಹಿಂದಿರುವ ಪ್ರಮುಖರಲ್ಲಿ ಬ್ಯಾನರ್ಜಿ ಅವರೂ ಇದ್ದಾರೆಂಬುದನ್ನು ಮರೆಯುವಂತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.
“ಹಲವಾರು ಬಿಜೆಪಿಯೇತರ ಮುಖ್ಯಮಂತ್ರಿಗಳು ಈ ಔತಣಕೂಟದಲ್ಲಿ ಪಾಲ್ಗೊಳ್ಳದೆ ಉಳಿದಿದ್ದರು. ಆದರೆ ಇದಕ್ಕಾಗಿ ಒಂದು ದಿನ ಮುಂಚಿತವಾಗಿ ದೆಹೆಲಿಗೆ ತೆರಳಿದ್ದ ದೀದಿ (ಮಮತಾ ಬ್ಯಾನರ್ಜಿ), ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಈ ಕೂಟದಲ್ಲಿ ಪಾಲ್ಗೊಂಡಿದ್ದರು. ಅವರು ಹೀಗೇಕೆ ಮಾಡಿದರೋ ತಿಳಿಯಲಿಲ್ಲ. ಅವರೊಬ್ಬರು ಈ ಔತಣಕೂಟದಲ್ಲಿ ಪಾಲ್ಗೊಳ್ಳದಿದ್ದರೆ ಏನೂ ಆಗುತ್ತಿರಲಿಲ್ಲ. ಆಕಾಶ ಕೆಳಗೆ ಬೀಳುತ್ತಲೂ ಇರಲಿಲ್ಲ, ಮಹಾಭಾರತ ಅಥವಾ ಕುರಾನ್ ಅಪವಿತ್ರವೂ ಆಗುತ್ತಿರಲಿಲ್ಲ” ಎಂದು ಚೌಧರಿ ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಶಂತನು ಸೆನ್, ಇಂಡಿಯಾ ಬ್ಲಾಕ್ ನಿರ್ಮಾಣದ ಹಿಂದೆ ಮಮತಾ ಅವರ ಶ್ರಮವೂ ಇದೆ ಎಂಬುದನ್ನು ಎಲ್ಲರೂ ತಿಳಿದಿದ್ದಾರೆ. ಅವರ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಆಡಳಿತಾತ್ಮಕ ಕಾರಣಗಳಿಗಾಗಿ ತೆಗೆದುಕೊಂಡ ನಿಲುವನ್ನು ಹೀಗೆ ಟೀಕಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ ಏನು?
ಕಾಂಗ್ರೆಸ್ ಮತ್ತು ಟಿಎಂಸಿ ನಾಯಕರ ನಡುವಿನ ಈ ಜಟಾಪಟಿಯನ್ನು ತನ್ನ ಲಾಭಕ್ಕೆ ಬಳಸಿಕೊಂಡಿರುವ ಬಿಜೆಪಿ, ಯಾವುದೇ ದೂರದೃಷ್ಟಿಯೂ ಇಲ್ಲದಂತೆ ಕೂಡಿದ ಪಕ್ಷಗಳಿಂದ ದ್ವಂದ್ವ ಮತ್ತು ವಿರೋದಾಭಾಸಗಳಿಗಿಂತ ಹೆಚ್ಚಿನದನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ವ್ಯಂಗ್ಯವಾಡಿದೆ. “ಜಿ 20 ಶೃಂಗಸಭೆಯನ್ನು ಪ್ರಿಯಾಂಕಾ ವಾಧ್ರಾ ಟೀಕಿಸುತ್ತಾರೆ; ಶಶಿ ತರೂರ್ ಶ್ಲಾಘಿಸುತ್ತಾರೆ. ಮಮತಾ ಅವರನ್ನು ಕಾಂಗ್ರೆಸ್ ನಾಯಕ ಆಧೀರ್ ರಂಜನ್ ಟೀಕಿಸಿಸುತ್ತಾರೆ; ಕಾಂಗ್ರೆಸ್ ಮುಖ್ಯಮಂತ್ರಿ ಸುಖ್ವಿಂದರ್ ಸುಖು ಔತಣಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಇದೆಂಥಾ ವಿರೋಧಾಭಾಸ ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಪ್ರತಿಕ್ರಿಯಿಸಿದ್ದಾರೆ.