Site icon Vistara News

Aditi Arya: ಉದ್ಯಮಿ ಜಯ್‌ ಕೋಟಕ್‌ ಕೈ ಹಿಡಿದ ಮಾಜಿ ಮಿಸ್ ಇಂಡಿಯಾ

aditi

aditi

ಮುಂಬೈ: ಕೋಟ್ಯಾಧಿಪತಿ ಬ್ಯಾಂಕರ್ ಉದಯ್ ಕೋಟಕ್ ಅವರ ಪುತ್ರ ಜಯ್ ಕೋಟಕ್ (Jay Kotak) ಹಸೆಮಣೆಗೇರಿದ್ದಾರೆ. ಮಾಜಿ ಮಿಸ್ ಇಂಡಿಯಾ ಅದಿತಿ ಆರ್ಯ (Aditi Arya) ಅವರನ್ನು ಮಂಗಳವಾರ (ನವೆಂಬರ್‌ 7) ಮುಂಬೈಯ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾದರು. ಉದಯಪುರದಲ್ಲಿ ವಿವಾಹದ ಇತರ ಕಾರ್ಯಕ್ರಮಗಳು ನೆರವೇರಿದವು.

ಇವರಿಬ್ಬರ ಲವ್‌ ಸ್ಟೋರಿ ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಇಬ್ಬರೂ ಕೆಲವು ವರ್ಷಗಳ ಹಿಂದೆ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು. ಆದರೆ ಆಗ ಅವರು ಹೆಚ್ಚು ಮಾತನಾಡಿರಲಿಲ್ಲ. ಅವರ ಸಂವಾದ ಕೆಲವು ನಿಮಿಷಗಳ ಕಾಲವಷ್ಟೇ ನಡೆದಿತ್ತು. ಬಳಿಕ ಜಯ್ ಕೋಟಕ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅದಿತಿ ಆರ್ಯ ಅವರಿಗೆ ಮೆಸೇಜ್‌ ಮಾಡಿದ್ದರು. ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು ಎಂದು ಮೂಲಗಳು ತಿಳಿಸಿವೆ.

ಜಯ್ ಕೋಟಕ್ ಮತ್ತು ಅದಿತಿ ಆರ್ಯ 2022ರ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಹರಡಿತ್ತು. ಬಳಿಕ ಜೋಡಿ ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ಫೋಸ್‌ ನೀಡುತ್ತಿರುವ ಫೋಟೊ ವೈರಲ್‌ ಆಗಿತ್ತು. ಆದರೂ ಇಬ್ಬರೂ ವದಂತಿಯ ಬಗ್ಗೆ ತುಟಿ ಬಿಚ್ಚಿರಲಿಲ್ಲ. ತಮ್ಮ ಸಂಬಂಧದ ಬಗ್ಗೆ ಸ್ಪಷ್ಟನೆ ಕೊಟ್ಟಿರಲಿಲ್ಲ.

ಬಳಿಕ ಜಯ್‌ ಈ ವರ್ಷದ ಮೇ ತಿಂಗಳಲ್ಲಿ ಅದಿತಿ ಆರ್ಯ ಅವರನ್ನು ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದರು. “ನನ್ನ ಭಾವಿ ಪತ್ನಿ ಅದಿತಿ ಯೇಲ್ ವಿಶ್ವವಿದ್ಯಾಲಯದಿಂದ ಎಂಬಿಎ ಮುಗಿಸಿದ್ದಾರೆ. ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ ಅದಿತಿ ಆರ್ಯ” ಎಂದು ಜಯ್‌ ಬರೆದುಕೊಂಡಿದ್ದರು. ಆ ಮೂಲಕ ಗಾಳಿಸುದ್ದಿಗೆ ಬ್ರೇಕ್‌ ಹಾಕಿದ್ದರು.

ಬ್ಯುಸಿನೆಸ್‌ ಮ್ಯಾನ್‌

ಜಯ್‌ ತಮ್ಮ ತಂದೆ ಉದಯ್ ಕೋಟಕ್ ಅವರಂತೆ ಉದ್ಯಮಿ. ಜಯ್‌ ಡಿಜಿಟಲ್ ಬ್ಯಾಂಕ್ ಕೋಟಕ್ 811ರ ಸಹ-ಮುಖ್ಯಸ್ಥ. ಅವರು ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಮುಗಿಸಿದ್ದಾರೆ. ಅಲ್ಲದೆ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಬಿಎ ಪದವಿ ಪಡೆದಿದ್ದಾರೆ. ಉದಯ್ ಕೋಟಕ್ ಅವರು ಕೊಟಕ್ ಮಹೀಂದ್ರಾ ಬ್ಯಾಂಕ್‌ ಸ್ಥಾಪಕ ಮತ್ತು ಇದರ ಮೌಲ್ಯ 1.3 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Survey Report: ಭಾರತೀಯರಿಗೆ ನಿತ್ಯ 12 ಸ್ಕ್ಯಾಮ್ ಎಸ್ಸೆಮ್ಮೆಸ್! ಸಮೀಕ್ಷೆಯಲ್ಲಿ ಏನಿದೆ ಮಾಹಿತಿ?

ನಟಿಯೂ ಹೌದು

ದೆಹಲಿ ವಿಶ್ವವಿದ್ಯಾಲಯದ ಶಹೀದ್ ಸುಖದೇವ್ ಕಾಲೇಜ್ ಆಫ್ ಬಿಸಿನೆಸ್ ಸ್ಟಡೀಸ್‌ನಿಂದ ಪದವಿ ಪಡೆದ ಅದಿತಿ ಆರ್ಯ, ಅರ್ನ್ಸ್ಟ್ & ಯಂಗ್‌(Ernst & Young)ನಲ್ಲಿ ಸಂಶೋಧನಾ ವಿಶ್ಲೇಷಕರಾಗಿ ಕೆಲಸ ಮಾಡಿದ್ದಾರೆ. ಅವರು 2015ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಅವರು ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮಾತ್ರವಲ್ಲ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 2016ರಲ್ಲಿ ʼಇಸಂʼ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2019ರಲ್ಲಿ ದರ್ಶನ್‌ ಅಭಿನಯದ ʼಕುರುಕ್ಷೇತ್ರʼ ಸಿನಿಮಾದಲ್ಲಿ ಉತ್ತರಾ ಪಾತ್ರ ನಿರ್ವಹಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟರು. ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಅಭಿನಯದ ಹಿಂದಿ ಚಿತ್ರ ʼ83ʼಯಲ್ಲೂ ನಟಿಸಿದ್ದಾರೆ. ಅದಿತಿ ನಟಿಸಿರುವ ಇನ್ನೊಂದು ಕನ್ನಡ ಚಿತ್ರ ʼತ್ರಿಶೂಲಂʼ ಬಿಡುಗಡೆಯಾಗಬೇಕಿದೆ. ಈ ವರ್ಷ ಅವರು ಅಮೆರಿಕಾದ ಯೇಲ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version