Site icon Vistara News

Aditya L1 Mission: ಭೂಮಿಯ ಸುತ್ತ ಎರಡನೇ ಸುತ್ತು ಮುಗಿಸಿದ ಆದಿತ್ಯ L1, ಇನ್ನೂ 3 ಸುತ್ತು ಬಾಕಿ

aditya l1 mission

ಹೊಸದಿಲ್ಲಿ: ಭಾರತದ ಮಹತ್ವಾಕಾಂಕ್ಷೆಯ ‘ಸೂರ್ಯಯಾನʼ ಆದಿತ್ಯ L1 (Aditya L1 Mission) ಭೂಮಿಯ ಸುತ್ತ ಎರಡನೇ ಸುತ್ತನ್ನು ಮುಗಿಸಿದೆ. ಸೆಪ್ಟೆಂಬರ್ 5ರ ರಾತ್ರಿ 2.45ಕ್ಕೆ ಆದಿತ್ಯ ಎಲ್1 ಭೂಮಿಗೆ ಎರಡನೇ ಸುತ್ತು ಪೂರ್ಣಗೊಳಿಸಿತು. ಆದಿತ್ಯ L1 ಸೆಪ್ಟೆಂಬರ್ 10ರಂದು ರಾತ್ರಿ 2:30ಕ್ಕೆ ಮೂರನೇ ಕಕ್ಷೆಯನ್ನು ಪೂರ್ಣಗೊಳಿಸಲಿದೆ ಎಂದು ಇಸ್ರೋ (ISRO) ತಿಳಿಸಿದೆ.

ಕಳೆದ ಶನಿವಾರ ಬೆಳಿಗ್ಗೆ 11.45ರ ಸುಮಾರಿಗೆ ಇಸ್ರೋ ಭೂಮಿಯಿಂದ ಜಿಗಿದಿತ್ತು. ಸೆಪ್ಟೆಂಬರ್ 3ರಂದು ಆದಿತ್ಯ L1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಮುಗಿಸಿತ್ತು. ಅದರ ಸಹಾಯದಿಂದ ಆದಿತ್ಯ ಎಲ್1 ಮುಂದಿನ ಕಕ್ಷೆಗೆ ಹೋಗಿತ್ತು. ಸದ್ಯ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಡಿರುವ ಟ್ವೀಟ್‌ನಲ್ಲಿ, ʼಆದಿತ್ಯ-ಎಲ್1 ಮಿಷನ್ ಉಪಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೊದಲ ಭೂಮಿಯ ಕಕ್ಷೆಯ ಸುತ್ತನ್ನು ಬೆಂಗಳೂರಿನ ISTRACನಿಂದ ಯಶಸ್ವಿಯಾಗಿ ಕಾರ್ಯಗತಗೊಳಿಸಲಾಯಿತು. ಹೊಸ ಕಕ್ಷೆಯಲ್ಲಿ ಆದಿತ್ಯ ಎಲ್‌1 245 ಕಿಮೀ x 22,459 ಕಿಮೀನಂತೆ ಚಲಿಸಲಿದೆ ಎಂದು ತಿಳಿಸಿದೆ.

ಹೀಗೆ ಭೂಮಿಯ ಕಕ್ಷೆಗೆ ಒಟ್ಟು ಐದು ಸುತ್ತುಗಳನ್ನು ಪೂರ್ಣಗೊಳಿಸಿದ ಬಳಿಕ ಲಾಗ್ರೇಂಜ್‌ ಪಾಯಿಂಟ್‌ನತ್ತ ಆದಿತ್ಯ ಚಲಿಸಲಿದೆ. ಒಂದಕ್ಕಿಂತ ಒಂದು ಸುತ್ತುಗಳು ಸುದೀರ್ಘವಾಗಿರುತ್ತವೆ. ಮುಂದಿನ ಪಯಣಕ್ಕೆ ಬೇಕಾದ ವೇಗೋತ್ಕರ್ಷವನ್ನು ಈ ಸುತ್ತುಗಳಿಂದ ಅದು ಪಡೆಯುತ್ತದೆ.

ಭಾರತದ ಮೊದಲ ಸೌರ ವೀಕ್ಷಣಾಲಯವಾಗಿರುವ ಆದಿತ್ಯ, L1 ಲಾಗ್ರೇಂಜ್‌ ಪಾಯಿಂಟ್‌ನಲ್ಲಿ ನಿಂತು ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. L1 ಎಂದರೆ ʻಲಾಗ್ರೇಂಜ್ ಪಾಯಿಂಟ್ 1′. ಅಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಲ್ಲಿಸಲಾಗುತ್ತದೆ. ಸೌರ ಫಲಕಗಳನ್ನು ಸಕ್ರಿಯಗೊಳಿಸಿದ ನಂತರ, ಉಪಗ್ರಹವು ವಿದ್ಯುತ್ ಇಂಧನವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ.

ಆದಿತ್ಯ-L1 ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿದ್ದು ಸೂರ್ಯನನ್ನು ಅಧ್ಯಯನ ಮಾಡುತ್ತದೆ. ಈ ಅಂತರವು ಭೂಮಿ ಮತ್ತು ಸೂರ್ಯನ ನಡುವಿನ ಒಟ್ಟು ಅಂತರದ ಶೇಕಡಾ ಒಂದು ಮಾತ್ರ ಆಗಿದೆ. ಬಾಹ್ಯಾಕಾಶ ನೌಕೆಯು ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನ ಹತ್ತಿರ ಹೋಗುವುದಿಲ್ಲ.

ಇದನ್ನೂ ಓದಿ: Aditya L1 Mission: ಮೊದಲ ಕಕ್ಷೆ ಬದಲಿಸಿ ಯಶಸ್ವಿಯಾಗಿ ಮುನ್ನುಗ್ಗಿದ ಆದಿತ್ಯ ಎಲ್‌ 1; ಇಸ್ರೋ ಸಂತಸ

Exit mobile version