ನವದೆಹಲಿ: ಸೂರ್ಯನ ಮೇಲ್ಮೈ ಅಧ್ಯಯನಕ್ಕಾಗಿ ಭಾರತವು ಕೈಗೊಂಡಿರುವ ಆದಿತ್ಯ ಎಲ್ 1 ಮಿಷನ್ (Aditya L1 Mission) ಮಹತ್ವದ ಘಟ್ಟಕ್ಕೆ ಸಜ್ಜಾಗಿದೆ. ಸೋಮವಾರ ಮಧ್ಯ ರಾತ್ರಿ ಆದಿತ್ಯ ಎಲ್1, ಟ್ರಾನ್ಸ್-ಲ್ಯಾಗ್ರೇಂಜ್ ಪಾಯಿಂಟ್ 1 ಇನ್‍ಸರ್ಷನ್(Trans-Lagrangian Point 1 Insertion – TL1I) ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಅಂದರೆ, ಆದಿತ್ಯ ಎಲ್1 ಭೂಮಿಯನ್ನು (Earth) ಶಾಶ್ವತವಾಗಿ ತೊರೆಯಲಿದ್ದು, ಸೂರ್ಯನ ಅಧ್ಯಯನಕ್ಕಾಗಿ 15 ಲಕ್ಷ ಕಿ.ಮೀ. ದೂರದ ಪ್ರಯಾಣಕ್ಕೆ ಮುನ್ನುಡಿ ಬರೆಯಲಿದೆ ಎಂದು ಇಸ್ರೋ(ISRO) ಹೇಳಿದೆ.
ಟಿಎಲ್1 ಇನ್‌ಸರ್ಷನ್ ಪ್ರಕ್ರಿಯೆಯು ಒಂದು ರೀತಿಯಲ್ಲಿ ಆದಿತ್ಯ ಎಲ್1ಗೆ ಭೂಮಿ ಬೀಳ್ಕೊಡುಗೆ ನೀಡಿದೆ ಹಾಗೆ ಎನ್ನಬಹುದು. ಈ ಪ್ರಕ್ರಿಯೆಯು ಸೆಪ್ಟೆಂಬರ್ 19, ಸೋಮವಾರ ಮಧ್ಯ ರಾತ್ರಿ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ. ಇದರೊಂದಿಗೆ ಸೂರ್ಯ ಮತ್ತು ಭೂಮಿಯ ನಡುವಿನ ಲ್ಯಾಗ್ರೇಂಜ್ ಪಾಯಿಂಟ್‌ನ 110 ದಿನಗಳ ಪಯಣವನ್ನು ಆರಂಭಿಸಲಿದೆ. ಈ ಪಾಯಿಂಟ್ ಅಂದಾಜು ಭೂಮಿಯಿಂದ 15 ಲಕ್ಷ ಕಿ.ಮೀ. ದೂರವಿದೆ.
ಆದಿತ್ಯ ಎಲ್ 1 ಮಿಷನ್ ಅನ್ನು ಸೆಪ್ಟೆಂಬರ್ 2ರಂದು ಲಾಂಚ್ ಮಾಡಲಾಗಿತ್ತು. ಆದಿತ್ಯ ಎಲ್ 1 ಮಿಷನ್ ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಇದು ಬಾಹ್ಯಾಕಾಶ ಹವಾಮಾನದ ಆಯಾಮಗಳು ಮತ್ತು ಕಣಗಳು ಮತ್ತು ಕ್ಷೇತ್ರಗಳ ಪ್ರಸರಣವನ್ನು ಸಹ ಅಧ್ಯಯನ ಮಾಡಲಿದೆ. ಆದಿತ್ಯ ಎಲ್ 1 ವ್ಯೂಮನೌಕೆಯು ಭೂ ಕಕ್ಷೆಯ ನಾಲ್ಕು ಸುತ್ತಗಳನ್ನು ಯಶಸ್ವಿಯಾಗಿ ಪೂರೈಸಿ, ಇದೀಗ ಎಲ್ 1 ಪಾಯಿಂಟ್ ಕಡೆಗೆ ತನ್ನ ಪಯಣವನ್ನು ಆರಂಭಿಸುತ್ತಿದೆ.
ವೈಜ್ಞಾನಿಕ ಅಧ್ಯಯನ ಆರಂಭಿಸಿದ ಆದಿತ್ಯ ಎಲ್ 1
ಈ ಮಧ್ಯೆ, ಆದಿತ್ಯ ಎಲ್ 1 ವೈಜ್ಞಾನಿಕ ತನ್ನ ಅಧ್ಯಯನವನ್ನು ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ. ಆದಿತ್ಯ ಎಲ್ 1ನಲ್ಲಿರುವ ದಿ ಸುಪ್ರಾ ಥರ್ಮಲ್ ಆ್ಯಂಡ್ ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್(STEPS) ತನ್ನ ಕೆಲಸವನ್ನು ಆರಂಭಿಸಿದೆ. ಇದು ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪಿರಿಯಮೆಂಟ್‌ನ ಸಾಧನದ ಭಾಗವಾಗಿದೆ. ಸ್ಟೆಪ್ಸ್ ಸೆಪ್ಟೆಂಬರ್ 10ರಂದೇ ಕ್ರಿಯಾಶೀಲವಾಗಿದ್ದು, ತನ್ನ ಕೆಲಸವನ್ನು ಆರಂಭಿಸಿದೆ.
ಈ ಸುದ್ದಿಯನ್ನೂ ಓದಿ: Aditya L1 Mission: 4ನೇ ಬಾರಿ ಕಕ್ಷೆ ಬದಲಾಯಿಸಿದ ಆದಿತ್ಯ ಎಲ್ 1 ಮಿಷನ್; ಇನ್ನೊಂದೇ ಹೆಜ್ಜೆ ಬಾಕಿ
ಸಂವೇದಕಗಳನ್ನು ಒಳಗೊಂಡಿರುವ ಸ್ಟೆಪ್ಸ್, ಪ್ರತಿಯೊಂದೂ ವಿಭಿನ್ನ ದಿಕ್ಕುಗಳಲ್ಲಿ ವೀಕ್ಷಿಸುತ್ತದೆ ಮತ್ತು 20 keV/ನ್ಯೂಕ್ಲಿಯೊನ್‌ನಿಂದ 5 MeV/ನ್ಯೂಕ್ಲಿಯೊನ್‌ವರೆಗಿನ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳನ್ನು ಅಳೆಯುತ್ತದೆ ಮತ್ತು 1 MeV ಮೀರಿದ ಎಲೆಕ್ಟ್ರಾನ್‌ಗಳನ್ನು ಅಧ್ಯಯನ ನಡೆಸುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥ ಹೇಳಿದೆ.