Site icon Vistara News

YouTube: ಫೇಸ್‌ಬುಕ್‌ ಸಮಸ್ಯೆ ಬಗೆಹರಿದ ಬೆನ್ನಲ್ಲೇ ಯುಟ್ಯೂಬ್‌ ಸರ್ವರ್‌ ಡೌನ್‌, ಜನರಿಗೆ ಪರದಾಟ

YouTube

After Facebook, Instagram global outage, YouTube users complain of snag

ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಸರ್ವರ್‌ ಡೌನ್‌ (Server Down) ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಗೂಗಲ್‌ ಒಡೆತನದ ಯುಟ್ಯೂಬ್‌ ಸರ್ವರ್‌ (YouTube Server) ಕೂಡ ಡೌನ್‌ ಆಗಿದ್ದು, ಎಕ್ಸ್‌ ಸಾಮಾಜಿಕ ಜಾಲತಾಣಕ್ಕೆ ಭಾರಿ ಬೇಡಿಕೆ ಉಂಟಾಗಿದೆ. ಇನ್ನು ಸರ್ವರ್‌ ಡೌನ್‌ ಕುರಿತು ಎಕ್ಸ್‌ನಲ್ಲೇ ಭಾರಿ ಚರ್ಚೆ, ಟ್ರೋಲ್‌, ಆಕ್ರೋಶ, ಅಸಮಾಧಾನ ವ್ಯಕ್ತವಾಗುತ್ತಿದೆ. ಫೇಸ್‌ಬುಕ್‌ ಸಮಸ್ಯೆ ಬಗೆಹರಿದಿದೆ ಎಂದು ಮೆಟಾ ತಿಳಿಸಿದ ಬೆನ್ನಲ್ಲೇ ಯುಟ್ಯೂಬ್‌ ಬಳಕೆದಾರರಿಗೆ ತೊಂದರೆಯಾಗಿದೆ. ಆದರೆ, ಇದುವರೆಗೆ ಗೂಗಲ್‌ ಸಂಸ್ಥೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬುಧವಾರ (ಮಾರ್ಚ್‌ 5) ಸಂಜೆ ಮೊದಲು ಫೇಸ್‌ಬುಕ್‌ ಸರ್ವರ್‌ ಡೌನ್‌ ಆಯಿತು. ಇದಾದ ಕೆಲ ಹೊತ್ತಿನಲ್ಲಿಯೇ ಇನ್‌ಸ್ಟಾಗ್ರಾಂ ಬಳಕೆದಾರರಿಗೂ ಸರ್ವರ್‌ ಡೌನ್‌ ಬಿಸಿ ತಾಕಿತು. ಮೊಬೈಲ್, ಕಂಪ್ಯೂಟರ್‌ ಹಾಗೂ ಲ್ಯಾಪ್‌ಟಾಪ್‌ ಸೇರಿ ಎಲ್ಲೆಡೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ಲಾಗ್‌ಔಟ್‌ ಆದವು. ಬಳಿಕ ಲಾಗ್‌ಇನ್‌ ಕೂಡ ಆಗಲಿಲ್ಲ. ಇದಾದ ಕೆಲವೇ ನಿಮಿಷಗಳಲ್ಲಿ ಯುಟ್ಯೂಬ್‌ ಸರ್ವರ್‌ ಕೂಡ ಡೌನ್‌ ಆಗಿದ್ದು, ಜಾಲತಾಣಗಳ ಪ್ರಿಯರ ಅಸಮಾಧಾನ ಹೆಚ್ಚಾಗುವಂತೆ ಮಾಡಿದೆ. ಈಗಲೂ ಕೆಲವರ ಫೇಸ್‌ಬುಕ್‌ ಖಾತೆಗಳು ಲಾಗ್‌ಇನ್‌ ಆದರೆ, ಬಹುತೇಕ ಬಳಕೆದಾರರಿಗೆ ಲಾಗ್‌ಇನ್‌ ಸಮಸ್ಯೆಯಾಗುತ್ತಿದೆ.

ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆಯು ಯುಟ್ಯೂಬ್‌ ಬಳಕೆದಾರರ ಸಮಸ್ಯೆ ಕುರಿತು ಮಾಹಿತಿ ನೀಡಿದೆ. ಗೂಗಲ್‌ ಕಂಪನಿಯ ಯುಟ್ಯೂಬ್‌ನಲ್ಲಿ ವಿಡಿಯೊಗಳು ಸ್ಟ್ರೀಮ್‌ ಆಗುತ್ತಿಲ್ಲ. ಹೊಸ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಕೂಡ ಆಗುತ್ತಿಲ್ಲ ಎಂಬುದಾಗಿ ನೂರಾರು ಜನ ದೂರುತ್ತಿದ್ದಾರೆ ಎಂಬುದಾಗಿ ತಿಳಿಸಿದೆ. ಯುಟ್ಯೂಬ್‌ ಬಳಕೆದಾರರು ಕೂಡ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳು ಸ್ಟ್ರೀಮ್‌, ಡೌನ್‌ಲೋಡ್‌ ಆಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Facebook Server: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

ಕ್ಷಮೆಯಾಚಿಸಿದ ಮೆಟಾ

ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಇಲ್ಲದೆ ಜನ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮೆಟಾ ಕಂಪನಿಯು ಪ್ರತಿಕ್ರಿಯಿಸಿದ್ದು, ಜನರ ಕ್ಷಮೆಯಾಚಿಸಿದೆ. “ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ನಿಂದಾಗಿ ಸೇವೆಯಲ್ಲಿ ವ್ಯತ್ಯಯವಾಗಿರುವುದಕ್ಕೆ ಕ್ಷಮೆಯಾಚಿಸುತ್ತೇವೆ. ತಾಂತ್ರಿಕ ಕಾರಣಗಳಿಂದಾಗಿ ಎರಡೂ ಸಾಮಾಜಿಕ ಜಾಲತಾಣಗಳನ್ನು ಬಳಸಲು ಕಷ್ಟವಾಗುತ್ತಿದೆ. ಶೀಘ್ರದಲ್ಲಿಯೇ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ಈಗಾಗಲೇ ನುರಿತ ತಂಡವು ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಸಮಸ್ಯೆ ಬಗೆಹರಿಸಲಾಗಿದ್ದು, ಹೆಚ್ಚಿನ ಖಾತೆಗಳು ಲಾಗ್‌ಇನ್‌ ಆಗುತ್ತಿವೆ” ಎಂದು ಮೆಟಾ ಸಂಸ್ಥೆಯ ಸಂವಹನ ವಿಭಾಗದ ಡೈರೆಕ್ಟರ್ ಆ್ಯಂಡಿ ಸ್ಟೋನ್‌ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version