ನವದೆಹಲಿ: ದೊಡ್ಡ ದೊಡ್ಡ ಕಂಪನಿಗಳಲ್ಲಿ, ಅದರಲ್ಲೂ ಟೆಕ್ ಕಂಪನಿಗಳಲ್ಲಿ ಉದ್ಯೋಗ ಮಾಡುವುದೇ ಪ್ರತಿಷ್ಠೆ ಎಂಬ ಮನಸ್ಥಿತಿಯೇ ಇತ್ತೀಚೆಗೆ ಬದಲಾಗುತ್ತಿದೆ. ಟ್ವಿಟರ್‌ಅನ್ನು ಖರೀದಿಸಿದ ಎಲಾನ್ ಮಸ್ಕ್, ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದಾರೆ. ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರ ಬೆನ್ನಲ್ಲೇ ಬಹುರಾಷ್ಟ್ರೀಯ ಕಂಪನಿಯಾದ ಅಮೆಜಾನ್ (Amazon Layoffs) ಕೂಡ ನೌಕರರಿಗೆ ಗೇಟ್ ಪಾಸ್ ನೀಡುತ್ತಿದೆ.
ಅಮೆಜಾನ್ ರೋಬೊಟಿಕ್ಸ್ ಎಐ (Amazon Robotics AI) ವಿಭಾಗದಲ್ಲಿ ಎಂಜಿನಿಯರ್ ಆಗಿದ್ದ ಜೆಮಿ ಝಾಂಗ್ ಅವರು ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಮಾಹಿತಿ ನೀಡಿದ್ದಾರೆ. “ಅಚ್ಚರಿಯ ಬೆಳವಣಿಗೆಯಲ್ಲಿ ಅಮೆಜಾನ್ ರೋಬೊಟಿಕ್ಸ್ ಎಐ ವಿಭಾಗದಿಂದ ನನ್ನನ್ನು ವಜಾಗೊಳಿಸಲಾಗಿದೆ. ಅಮೆಜಾನ್‌ನಲ್ಲಿ ನನ್ನ ಒಂದೂವರೆ ವರ್ಷದ ಪ್ರಯಾಣ ಅಂತ್ಯವಾಗಿದೆ” ಎಂದು ತಿಳಿಸಿದ್ದಾರೆ.
ಜೆಮಿ ಝಾಂಗ್ ಮಾತ್ರವಲ್ಲ ರೋಬೊಟಿಕ್ಸ್ ಎಐ ವಿಭಾಗದಲ್ಲಿ ಬಹುತೇಕ ನೌಕರರನ್ನೂ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲಿಂಕ್ಡ್‌ಇನ್ ಮಾಹಿತಿ ಪ್ರಕಾರ ರೋಬೊಟಿಕ್ಸ್ ವಿಭಾಗದಲ್ಲಿ 3,766 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇಷ್ಟೂ ಜನರನ್ನು ವಜಾಗೊಳಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಜೆಮಿ ಝಾಂಗ್ ಪೋಸ್ಟ್ ಪ್ರಕಾರ ‘ವಜಾ ಪರ್ವ’ವಂತೂ ಆರಂಭವಾಗಿದೆ.
ಇದನ್ನೂ ಓದಿ | ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಲ್ಲಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಲು ನಿರ್ಧಾರ; Sorry ಎಂದ ಮಾರ್ಕ್ ಜುಕರ್ಬರ್ಗ್