ತಿರುವನಂತಪುರ: ಯಾವುದೇ ಹೊಸ ರೋಗ ಬಂದರೂ ಮೊದಲು ಲಗ್ಗೆ ಇಡುವುದು ಕೇರಳಕ್ಕೆ ಎಂಬುದು ಮತ್ತೊಮ್ಮೆ ದೃಢವಾಗಿದೆ. ಮೊನ್ನೆ ಮೊನ್ನೆಯಷ್ಟೇ Norovirus ರೋಗ ಬಂದಿದ್ದರೆ, ಅದರ ಬೆನ್ನಿಗೆ ಸ್ಕ್ರಬ್ ಟೈಪಸ್ (Scrub typhus) ರೋಗ ದಾಳಿ ಇಟ್ಟಿದೆ. ರಕ್ತ ಹೀರುವ ತಿಗಣೆಗಳು, ಉಣ್ಣಿಗಳ ಮೂಲಕ ಮಾನವ ದೇಹಕ್ಕೆ ಸೆರುವ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆ ಇದಾಗಿದೆ.
ಸ್ಕ್ರಬ್ ಟೈಫಸ್‌ನಿಂದ ಕೇರಳದಲ್ಲಿ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಜೂನ್ 2ರಂದು 15 ವರ್ಷದ ಬಾಲಕಿ ಪ್ರಾಣ ಕಳೆದುಕೊಂಡಿದ್ದರೆ, ಜೂನ್ 12ರಂದು 38 ವರ್ಷದ ಸವಿತಾ ಎಂಬ ಮಹಿಳೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ವರ್ಕಲಾದಲ್ಲಿ ಮೊದಲ ಸಾವಿನ ನಂತರ, ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಅವರು ರೋಗಿಯ ಮೂಲ ಸ್ಥಳ ಮತ್ತು ಅವರು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡುವಂತೆ ವಿಶೇಷ ವೈದ್ಯಕೀಯ ತಂಡಕ್ಕೆ ಸೂಚಿಸಿದ್ದಾರೆ. ಸೋಂಕು ಪೀಡಿತ ಪ್ರದೇಶಗಳಲ್ಲಿ ಸುರಕ್ಷತೆ ಬಲಪಡಿಸಲು ಮತ್ತು ಸೋಂಕಿಗೆ ಕಾರಣವಾಗುವ ಉಣ್ಣಿಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ. ಹಾಗಿದ್ದರೆ ಈ ಸ್ಕ್ರಬ್ ಟೈಫಸ್ ಅಂದರೆ ಏನು? ಗುಣ ಲಕ್ಷಣಗಳೇನು ಎಂದು ತಿಳಿದುಕೊಳ್ಳೋಣ.
ಸ್ಕ್ರಬ್ ಟೈಫಸ್ ಎಂದರೇನು?
ಸ್ಥಳೀಯ ಭಾಷೆಯಲ್ಲಿ ಚೆಲ್ಲು ಪಾನಿ ಎಂದು ಕರೆಯಲ್ಪಡುವ ಈ ರೋಗವು ತಿಗಣೆ, ಉಣ್ಣಿಗಳ ಮೂಲಕ ಹರಡುವ ಓರಿಯೆಂಟಿಯಾ ಸುತ್ಸುಗಮುಶಿ (Orientia tsutsugamushi) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ರೋಗವು ಲಾರ್ವಾ ಹಂತದಲ್ಲಿ ಉಣ್ಣಿಗಳಂತಹ ರಕ್ತ ಹೀರುವ ಕೀಟಗಳ ಮೂಲಕ ಹರಡುತ್ತದೆ. ಈ ಕೀಟಗಳಿಗೆ ಈ ಬ್ಯಾಕ್ಟೀರಿಯಾ ಇಲಿಗಳು, ಅಳಿಲುಗಳು ಮತ್ತು ಮೊಲಗಳಂತಹ ಪ್ರಾಣಿಗಳಿಂದ ತಗುಲಿಕೊಂಡು ಮನುಷ್ಯರಿಗೆ ಹರಡುತ್ತದೆ.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ (ಸಿಡಿಸಿ), ಆಗ್ನೇಯ ಏಷ್ಯಾ, ಇಂಡೋನೇಷ್ಯಾ, ಚೀನಾ, ಜಪಾನ್, ಭಾರತ ಮತ್ತು ಉತ್ತರ ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶಗಳಲ್ಲಿ ಸ್ಕ್ರಬ್ ಟೈಫಸ್‌ನ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ. ಈ ಪ್ರದೇಶಗಳಲ್ಲಿ ವಾಸಿಸುವ ಅಥವಾ ಾಲ್ಲಿಗೆ ಪ್ರಯಾಣಿಸುವ ಯಾರಾದರೂ ಸೋಂಕಿಗೆ ಒಳಗಾಗಬಹುದು.
ರೋಗಲಕ್ಷಣಗಳು ಏನೇನು?
ಜ್ವರ, ತಲೆನೋವು, ಮೈಕೈ ನೋವು ಮತ್ತು ಕೆಲವೊಮ್ಮೆ ದದ್ದುಗಳಂತಹ ರೋಗದ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೀಟವು ಕಚ್ಚಿದ 10 ದಿನಗಳಲ್ಲಿ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ.
ಚಿಹ್ನೆಗಳು ಮತ್ತು ರೋಗಲಕ್ಷಣಗಳು ಈ ರೀತಿಯಾಗಿರಬಹುದು:
ಜ್ವರ ಮತ್ತು ಶೀತ, ತಲೆನೋವು,
ಮೈಕೈ ನೋವು ಮತ್ತು ಸ್ನಾಯು ನೋವು,
ಕಚ್ಚಿದ ಸ್ಥಳದಲ್ಲಿ ಕಪ್ಪು, ಕಜ್ಜಿಯಂತಹ ಲಕ್ಷಣ,
ಸಾಮಾನ್ಯ ಗೊಂದಲದಿಂದ ಕೋಮಾದವರೆಗೆ ಮಾನಸಿಕ ಬದಲಾವಣೆಗಳು,
ಊದಿಕೊಂಡ ದುಗ್ಧರಸ ಗ್ರಂಥಿಗಳು, ತುರಿ ಕಜ್ಜಿಗಳು.
ಅನಾರೋಗ್ಯವು ಉಲ್ಬಣಿಸಿದರೆ ಅಂಗಾಂಗ ವೈಫಲ್ಯ ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು, ಇದು ಮಾರಣಾಂತಿಕವೂ ಆಗಬಹುದು. ರೋಗಲಕ್ಷಣಗಳು ಇತರ ರೋಗಗಳಂತೆಯೇ ಇರಬಹುದು ಎಂದು ಸಿಡಿಸಿ ಹೇಳಿದೆ.
ಚಿಕಿತ್ಸೆ ಏನು?
ಸ್ಕ್ರಬ್ ಟೈಫಸ್ ಅನ್ನು ಆಂಟಿಬಯೋಟಿಕ್ ಡಾಕ್ಸಿಸೈಕ್ಲಿನ್‌ನೊಂದಿಗೆ ಚಿಕಿತ್ಸೆ ನೀಡಬೇಕು. ರೋಗಲಕ್ಷಣಗಳು ಪ್ರಾರಂಭವಾದ ಕೂಡಲೇ ನೀಡಿದರೆ ಆಂಟಿಬಯೋಟಿಕ್‌ಗಳು ಹೆಚ್ಚು ಪರಿಣಾಮಕಾರಿ ಎಂದು ಸಿಡಿಸಿ ಹೇಳಿದೆ.
ರೋಗವನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ ಮತ್ತು ಸೋಂಕಿತ ಉಣ್ಣಿಗಳ ಸಂಪರ್ಕವನ್ನು ತಪ್ಪಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು.
ರೋಗವು ಸಾಮಾನ್ಯವಾಗಿ ಕಂಡುಬರುವ ಸ್ಥಳಗಳಿಗೆ ನೀವು ಪ್ರಯಾಣಿಸುವಾಗ, ಉಣ್ಣಿಗಳು ವಾಸಿಸುವಂತಹ ಸಸ್ಯವರ್ಗಗಳು ಮತ್ತು ಪೊದೆಗಳು ಇರುವ ಪ್ರದೇಶಗಳು ಸಂಪರ್ಕಕ್ಕೆ ಬರುವುದರಿಂದ ತಪ್ಪಿಸಿಕೊಳ್ಳಿ.
ಇದನ್ನೂ ಓದಿ| Vistara Explainer: ಕೇರಳದಲ್ಲಿ ಪತ್ತೆಯಾದ NOROVIRUS ಎಷ್ಟು ಡೇಂಜರಸ್?