ನವದೆಹಲಿ: ಪೇಟಿಎಂನ ಸಂಕಷ್ಟಗಳು (Paytm Crisis) ಬಗೆಹರಿಯುವಂತೆ ಕಾಣುತ್ತಿಲ್ಲ! ಭಾರತೀಯ ರಿಸರ್ವ್ ಬ್ಯಾಂಕ್(RBI), ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ವ್ಯವಹಾರ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ, ಉದ್ಯೋಗಿಗಳ ಭವಿಷ್ಯ ನಿಧಿ(EPFO) ಕೂಡ ತನ್ನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ಸ್ವೀಕರಿಸದಂತೆ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಇಪಿಎಫ್‌ಒ, “ಎಲ್ಲಾ ಕ್ಷೇತ್ರ ಅಧಿಕಾರಿಗಳಿಗೆ ಫೆಬ್ರವರಿ 23, 2024 ರಿಂದ ಪೇಟಿಎಂ ಪಾವತಿ ಬ್ಯಾಂಕ್‌ನಲ್ಲಿನ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ಸ್ವೀಕರಿಸುವುದನ್ನು ತಡೆಯಲು ಸೂಚಿಸಲಾಗಿದೆ. ಈ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಚಾರವನ್ನು ಪ್ರಾರಂಭಿಸಬೇಕು ಎಂದು ಗುರುವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸುಮಾರು 30 ಕೋಟಿ ಕಾರ್ಮಿಕರ 18 ಲಕ್ಷ ಕೋಟಿ ರೂಪಾಯಿ ಮೂಲಧನವನ್ನು ಹೊಂದಿದೆ. ಕಳೆದ ವರ್ಷ ಪಿಇಎಫ್ಒ, ಕ್ಲೈಮ್‌ಗಳನ್ನು ಇತ್ಯರ್ಥಪಡಿಸಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಅವಕಾಶವನ್ನು ನೀಡಿತ್ತು. ಇದೀಗ ಆ ಪ್ರಕ್ರಿಯೆಗೆ ನಿರ್ಬಂಧ ಹೇರಿದೆ.
ಫೆಬ್ರವರಿ 29 ರ ನಂತರ ಎಲ್ಲಾ ಠೇವಣಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಕೇಳಿದ ಒಂದು ವಾರದ ನಂತರ ಇಪಿಎಫ್ಒ ಈ ಆದೇಶವನ್ನು ಹೊರಡಿಸಿದೆ. “ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ವ್ಯವಹಾರ, ವ್ಯಾಲೆಟ್‌ಗಳಲ್ಲಿ ಯಾವುದೇ ಹೆಚ್ಚಿನ ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್ ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ. ಫೆಬ್ರುವರಿ 29, 2024 ರ ನಂತರ ಫಾಸ್ಟ್‌ಟ್ಯಾಗ್‌ಗಳು, ಎನ್‌ಸಿಎಂಸಿ ಕಾರ್ಡ್‌ಗಳು, ಇತ್ಯಾದಿ, ಯಾವುದೇ ಬಡ್ಡಿ, ಕ್ಯಾಶ್‌ಬ್ಯಾಕ್‌ಗಳು ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ ಕ್ರೆಡಿಟ್ ಮಾಡಬಹುದು,” ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಈ ಸುದ್ದಿಯನ್ನೂ ಓದಿ: Paytm Payments Bank: ತಪ್ಪು ತಿದ್ದಿಕೊಳ್ಳಲು ಸಮಯ ನೀಡಿದ್ರೂ ಪೇಟಿಎಂ ತಿದ್ದಿಕೊಳ್ಳಲಿಲ್ಲ ಎಂದ ಆರ್‌ಬಿಐ